ಯಳಂದೂರು: ರಂಜಾನ್ ಹಬ್ಬದ ಸನಿಹದಲ್ಲಿರುವಂತೆಯೇ ಮಾಂಸದ ಬೆಲೆ ದುಬಾರಿಯಾಗಿದೆ. ಪಟ್ಟಣದಲ್ಲಿ ಕುರಿ, ಆಡು ಮಾಂಸಕ್ಕೆ ಕೆ.ಜಿ.ಗೆ 700 ರೂ. ದಾಟುವ ಸಂಭವವಿದೆ. ಹಾಗೆಯೇ ಕೋಳಿ ಮಾಂಸವೂ 200 ರೂ.ರಿಂದ 225 ರೂ.ಗೆ ಮಾರಾಟವಾಗುತ್ತಿದೆ.
ಲಾಕ್‌ಡೌನ್ ಪರಿಣಾಮ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂತೆ, ಕುರಿ ಮಾರುಕಟ್ಟೆಗಳು ಸ್ಥಗಿತಗೊಂಡಿವೆ. ಜಿಲ್ಲೆಯ ಸುತ್ತಮುತ್ತಲ ಪ್ರದೇಶಕ್ಕೆ ಸಂತೆಮರಹಳ್ಳಿ ಹಾಗೂ ತೆರಕಣಾಂಬಿಯಲ್ಲಿ ನಡೆಯುವ ಸಂತೆ ಕುರಿ, ಮೇಕೆಗಳ ಮರಾಟ ಹೆಚ್ಚಾಗುತ್ತಿತ್ತು. ಇಲ್ಲಿಗೆ ಮಂಡ್ಯ ಜಿಲ್ಲೆಯಿಂದಲೂ ಜಾನುವಾರುಗಳನ್ನು ತಂದು ಮಾರಾಟ ಮಾಡು ತ್ತಿದ್ದರು. ಆದರೆ ಈಗ ಸಂತೆ ಹಾಗೂ ಮಾರುಕಟ್ಟೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಇದರಿಂದ ಕುರಿ,ಮೇಕೆಗಳ ಮಾರಾಟ ಕಡಿಮೆಯಾಗಿರುವುದೇ ಮಾಂಸದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಹಳ್ಳಿಗಳತ್ತ ಮಾಲೀಕರು: ಮಾಂಸದಂಗಡಿ ಮಾಲೀಕರೇ ಕುರಿ ಖರೀದಿಸಲು ಹಳ್ಳಿಗಳಿಗೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಕುರಿ, ಮೇಕೆಗಳನ್ನು ಸಾಕುವವರ ಸಂಖ್ಯೆ ಕಡಿಮೆ ಇದೆ. ಹಳ್ಳಿಗಳಲ್ಲಿ ಅವರು ಹೇಳಿರುವ ಬೆಲೆಗೇ ಕೊಂಡುಕೊಳ್ಳುವ ಅನಿವಾರ್ಯತೆಯೂ ಇದೆ.
ಕೋಳಿ ಬೆಲೆಯೂ ಹೆಚ್ಚಳ: ಇತ್ತ ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿ ಫಾರಂಗಳಲ್ಲಿ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ ಹಿನ್ನೆಲೆಯಲ್ಲಿ ಕೋಳಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಕೆ.ಜಿ.ಗೆ 140 ರಿಂದ 150 ಇದ್ದ ಬೆಲೆ ದಿಢೀರ್ 200ರಿಂದ 225 ರೂ.ಗೆ ಏರಿಕೆಯಾಗಿದೆ.
ಮಂಡ್ಯದಿಂದ ಬರ್ತೀತ್ತು: ಮಂಡ್ಯ ಜಿಲ್ಲೆಯಿಂದಲೇ ಹೆಚ್ಚು ಕುರಿಗಳು ಮಾರಾಟಕ್ಕೆ ಬರಿ¤ತ್ತು. ಲಾಕ್‌ಡೌನ್ ಕಾರಣ ಸಂತೆ, ಮಾರುಕಟ್ಟೆ ಇಲ್ಲದೆ, ಅಲ್ಲಿಂದ ಕುರಿಗಳು ಬರ್ತಿಲ್ಲ. ಗ್ರಾಮಗಳಿಗೆ ನಾವೇ ತೆರಳಿ ಕುರಿ ಖರೀದಿಸಬೇಕಿದೆ. ರೈತರೂ ಕುರಿ ಬೆಲೆ ಹೆಚ್ಚಿಸುತ್ತಿದ್ದು, ನಾವೂ ಮಾಂಸದ ಬೆಲೆ ಹೆಚ್ಚಿಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಮಾಂಸ ಮಾರಾಟಗಾರ ಸಾಧಿಕ್.