ಬೆಂಗಳೂರು: ಡಿಪ್ಲೊಮಾ ಶಿಕ್ಷಣದಲ್ಲಿ ಥಿಯರಿ ಮತ್ತು ಕೌಶಲಕ್ಕೆ ಸಮಾನ ಆದ್ಯತೆ ಇರಬೇಕು. ವಿದ್ಯಾರ್ಥಿಗಳು ಔದ್ಯೋಗಿಕವಾಗಿ ಬಳಸುವ ಯಂತ್ರೋಪಕರಣಗಳ ಬಗ್ಗೆ ಶಿಕ್ಷಣ ಪಡೆಯುವಾಗಲೇ ಮಾಹಿತಿ ಸಿಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ನಡೆದ ಪಾಲಿಟೆಕ್ನಿಕ್ ಡಿಪ್ಲೊಮಾ ಶಿಕ್ಷಣದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಬಗ್ಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಾಲಿಟೆಕ್ನಿಕ್ ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಬೋಧಕ ಸಿಬಂದಿಯ ಕೊರತೆಯನ್ನು ಅತಿಥಿ ಉಪನ್ಯಾಸಕರನ್ನು ನೇಮಿಸುವುದರ ಮೂಲಕ ತುಂಬಲು ಪ್ರಯತ್ನ ನಡೆಸುತ್ತಿದ್ದೇವೆ. ಸರಕಾರ ಸಹ ಆದಷ್ಟು ಅನುದಾನ ನೀಡಲು ಪ್ರಯತ್ನಿಸಲಿದೆ. ಇದರ ಜತೆಗೆ ಸಾಂಸ್ಥಿಕ ಸಾಮಾಜಿಕ ಹೊಣೆಯಡಿಯೂ ಸೌಲಭ್ಯಗಳನ್ನು ಒದಗಿಸಲು ಸರಕಾರ ಪ್ರಯತ್ನಿಸಲಿದೆ ಎಂದವರು ಭರವಸೆ ನೀಡಿದರು.ಉಪನ್ಯಾಸಕರು ಇಂದಿನ ಆಧುನಿಕ ವಿಷಯಗಳ ಬಗ್ಗೆ ತಿಳಿದುಕೊಂಡು ಅಗತ್ಯ ತರಬೇತಿ ಪಡೆಯಲು ಮುಂದಾಗಬೇಕು. ಅದೇ ರೀತಿ ಪ್ರಾಂಶುಪಾಲರು ತಮ್ಮ ಸುತ್ತಲಿನ ಕೈಗಾರಿಕೆಗಳ ಜತೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡು ಕೈಗಾರಿಕೆ – ಶೈಕ್ಷಣಿಕ ಪಾಲುದಾರಿಕೆ ಸ್ಥಾಪಿಸಿವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.