ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿರುವ ನೀರು ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಮೀಸಲಿಟ್ಟು ಉಳಿದ ನೀರನ್ನು ಬೇಸಿಗೆ ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಜಲಾಶಯಗಳಲ್ಲಿ ಸಂಗ್ರಹ ಮಾಡಿರುವ ನೀರು ಹಾಗೂ ಕುಡಿಯಲು ಪೂರೈಕೆ ಮಾಡಲು ಅಗತ್ಯ ಪ್ರಮಾಣ, ಉಳಿಯುವ ಪ್ರಮಾಣದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕುಡಿಯುವ ನೀರಿಗೆ ಸರ್ಕಾರ ಮೊದಲ ಆದ್ಯತೆ ನೀಡಲಾಗುತ್ತದೆ. ಆ ನಂತರ ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರವಾಹ ಹಾಗೂ ಜಲಾಶಯಗಳಿಂದ ರೈತರ ಜಮೀನುಗಳಲ್ಲಿ ಮಣ್ಣು ತುಂಬಿಕೊಂಡಿದ್ದು ಮುಂದಿನ ವರ್ಷದ ವೇಳೆಗೆ ಭೂಮಿ ಫಲವತ್ತತೆ ಆಗಲಿದೆ. ಬೆಳೆ ಹಾನಿಗೆ ಪರಿಹಾರ ಸಂಬಂಧ ರೈತರಿಂದ ಕ್ಲೈಮ್ ಪಡೆಯಲಾ ಗುತ್ತಿದೆ. ಕೆಲವೆಡೆ ತಾಂತ್ರಿಕ ಸಮಸ್ಯೆಗಳಿಂದ ತಡವಾಗುತ್ತಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಈ ವರ್ಷ ಸಕ್ಕರೆ ಉತ್ಪನ್ನ ಕಡಿಮೆ ಮಾಡಿ ಮೊಲಾಸಿಸ್ ಹಾಗೂ ಎಥೆನಾಲ್ ಪ್ರಮಾಣ ಹೆಚ್ಚಿಸಲು ತಿಳಿಸಲಾಗಿದೆ. ಇತ್ತೀಚೆಗೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರಕ್ಕೂ ಇದೇ ರೀತಿಯ ಸೂಚನೆ ನೀಡಲಾಗಿದೆ. ಇದರಿಂದ ತೈಲ ಆಮದು ಪ್ರಮಾಣ ಕಡಿಮೆಯಾಗಲಿದೆ ಎಂದರು.
ಇಸ್ರೇಲ್ ಮಾದರಿ ಕೃಷಿ ಪೈಲಟ್ ಯೋಜನೆಯಡಿ ಕೈಗೊಂಡ ಪ್ರದೇಶಗಳಿಂದ ಇನ್ನೂ ವರದಿ ಬಂದಿಲ್ಲ. ವರದಿ ಬಂದ ನಂತರ ಅಧ್ಯಯನ ನಡೆಸಿ ಮುಂದೆ ಮತ್ತಷ್ಟು ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.