ಹುಬ್ಬಳ್ಳಿ: ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಇದು ನಿರಂತರವಾದ ಜಾಲವಾಗಿದೆ. ಅದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಿಸಿಬಿಯವರು ನಿರಂತರವಾಗಿ ದಾಳಿ ನಡೆಸಿ ಜಾಲ ಭೇದಿಸುತ್ತಿದ್ದಾರೆ. ಬೆಂಗಳೂರು ಹೊರತುಪಡಿಸಿ ವಿವಿಧ ನಗರಗಳಲ್ಲೂ ಸಹ ಡ್ರಗ್ಸ್ ಮಾಫಿಯಾ ಇದೆ. ರಾಜ್ಯಕ್ಕೆ ಆಂಧ್ರಪ್ರದೇಶ ಹಾಗೂ ಗೋವಾದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ. ಅದನ್ನು ಮಟ್ಟ ಹಾಕಲು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಬಳಕೆ ಆರೋಪ ಪ್ರಕರಣವನ್ನು ಎನ್ ಸಿಬಿ ಹಾಗೂ ಸಿಸಿಬಿಯವರು ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ. ಅದು ಒಂದು ಹಂತಕ್ಕೆ ತಲುಪಿದ ನಂತರ ಹೆಸರು ಹಾಗೂ ವಿವರಗಳನ್ನು ಬಹಿರಂಗಪಡಿಸಬಹುದು ಎಂದರು.
ಇದನ್ನೂ ಓದಿ: ಚೆನ್ನೈ ತಂಡದಿಂದ ಹೊರಬಿದ್ದರೆ ರೈನಾ..? ಮಾಧ್ಯಮದ ಮುಂದೆ ರೈನಾ ಹೇಳಿದ್ದಿಷ್ಟು
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದೆ. ಇದನ್ನು ಶೂನ್ಯಕ್ಕೆ ತರಲು ನೇಮಕಾತಿ ಸಹ ನಡೆಯುತ್ತಿದೆ. ಕೋವಿಡ್-19 ನಂತರ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ಪೊಲೀಸರು ಸಹ ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಡಯಲ್ 100 ಇನ್ನು ಸಾಕಷ್ಟು ಪ್ರಮಾಣದಲ್ಲಿ ಆಕ್ಟೀವ್ ಆಗಬೇಕಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೇನೆ. ಕೆಲವೊಂದು ಪ್ರಕರಣಗಳು ತನಿಖಾ ಹಂತದಲ್ಲಿವೆ. ಆದಷ್ಟು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಿರಿಯ ಅಧಿಕಾರಿಗಳಿಗೂ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿರುವೆ. ಕೋವಿಡ್ ಸಂದರ್ಭದಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆಲ್ಲಾ ಧನ್ಯವಾದ ತಿಳಿಸಲು ರಾಜ್ಯ ಪ್ರವಾಸ ಮಾಡುತ್ತಿರುವೆ. 6 ಸಾವಿರ ಪೊಲೀಸರಿಗೆ ಕೋವಿಡ್ ಸೊಂಕು ತಗುಲಿದೆ. 40 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದರು.