Advertisement

ದಡಾರ-ರುಬೆಲ್ಲಾ ಚುಚ್ಚುಮದ್ದು ಕೊಡಿಸಿ

12:38 PM Feb 04, 2017 | |

ದಾವಣಗೆರೆ: ದಡಾರ- ರುಬೆಲ್ಲಾ ಕಾಯಿಲೆ ತಡೆಗಟ್ಟಲು ಜಿಲ್ಲಾದ್ಯಂತ ಫೆ.7ರಿಂದ 28ರ ವರೆಗೆ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 9ರಿಂದ 15 ವರ್ಷದೊಳಗಿನ ಮಕ್ಕಳಿಗೆ ಈ ಚುಚ್ಚುಮದ್ದು ಹಾಕಿಸಬೇಕೆಂದು ಪೋಷಕರಲ್ಲಿ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಕೋರಿದ್ದಾರೆ. 

Advertisement

ತಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ವೈರಸ್‌ನಿಂದ ಹರಡುವ ದಡಾರ- ರುಬೆಲ್ಲಾ ನಮ್ಮಲ್ಲಿ ಹೆಚ್ಚಾಗಿ ಕಾಡುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ನಮ್ಮ ದೇಶದಲ್ಲಿ ಶೇ.30ರಷ್ಟು ಮಕ್ಕಳಲ್ಲಿ ಈ ಕಾಯಿಲೆ ಇದೆ.

ಅಂಕಿ ಅಂಶಗಳ ಪ್ರಕಾರ ಇದುವರೆಗೆ 4.92ಲಕ್ಷ ಮಕ್ಕಳು ಈ ಕಾಯಿಲೆಗಳಿಂದ ಅಸುನೀಗಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆ. ಈ ವೈರಸ್‌ ತಡೆಗೆ ಸರ್ಕಾರ ಸೂಕ್ತ ಕ್ರಮದ ಮೂಲಕ ಭಾರತವನ್ನು ದಡಾರ-ರುಬೆಲ್ಲಾ ಕಾಯಿಲೆಮುಕ್ತ ದೇಶವನ್ನಾಗಿಸಲು ಮುಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ದೇಶಾದ್ಯಂತ ಈ ಲಸಿಕಾ ಅಭಿಯಾನ ಆಯೋಜಿಸಿದೆ ಎಂದು ಅವರು ಮಾಹಿತಿ ನೀಡಿದರು. 

ದಡಾರ ಕಾಯಿಲೆಯು ನ್ಯೂಮೋನಿಯಾ, ಅತಿಸಾರ ಭೇದಿಯಿಂದಾಗಿ ಜೀವಕ್ಕೆ ಅಪಾಯ ತಂದೊಡ್ಡಿದ್ದರೆ, ರುಬೆಲ್ಲಾ ಹುಟ್ಟುವ ಮಗುವಿಗೆ ಕುರುಡು, ಮಾನಸಿಕ ಅಸ್ವಸ್ಥತೆ, ಕಿವುಡುತನ, ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ.ಜೊತೆಗೆ ನವಜಾತ ಶಿಶುಮರಣ ಹಾಗೂ ವಿಕಲತೆ ಉಂಟು ಮಾಡುತ್ತದೆ.

ಇದು ಮಾರಾಣಾಂತಿಕ  ಕಾಯಿಲೆಯಾಗಿದೆ ಎಂದು ಅವರು ತಿಳಿಸಿದರು. ಮೀಸೆಲ್ಸ್‌ -ರುಬೆಲ್ಲಾ ಎಂಬ ಲಸಿಕೆ ಈ ಕಾಯಿಲೆ ಎದುರಿಸಲು ಬೇಕಾದ ರೋಗನಿರೋಧಕ ಶಕ್ತಿ ತುಂಬುತ್ತದೆ. ಈ ಲಸಿಕೆ ನೀಡುವುದರಿಂದ ಶೇ.95  ಕ್ಕಿಂತ ಹೆಚ್ಚು ಮಕ್ಕಳಿಗೆ ಜೀವನ ಪರ್ಯಂತ ರಕ್ಷಣೆ ಮಾಡಬಹುದಾಗಿದೆ.

Advertisement

ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ತಪ್ಪದೆ ಹಾಕಿಸಿ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ 9 ತಿಂಗಳಿನಿಂದ 15 ವರ್ಷ ವಯಸ್ಸಿನ 4.86 ಲಕ್ಷ ಮಕ್ಕಳಿದ್ದು, ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆ ನೀಡಬೇಕು ಎಂಬ ಉದ್ದೇಶದಿಂದ 3,554 ಲಸಿಕಾ ಕೇಂದ್ರ ತೆರೆಯಲಾಗಿದೆ.

ಈ ಕಾರ್ಯಕ್ಕಾಗಿ 50 ವಿಶೇಷ ತಂಡ ನಿಯೋಜಿಸಲಾಗಿದೆ. 1609 ಒಟ್ಟು ಲಸಿಕೆ ಹಾಕುವವರನ್ನು ನೇಮಿಸಲಾಗಿದೆ. ಇವರಲ್ಲದೆ 3,230 ಮಂದಿ ಆಶಾ, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಇಡೀ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಣೆಗೆ 369 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ  ಧಿಧೀಕ್ಷಕಿ ಡಾ| ನೀಲಾಂಬಿಕೆ, ಜಿಲ್ಲಾ ಆರೋಗ್ಯ ಅಧಿಕಾರಿ ತ್ರಿಪುಲಾಂಭ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾ, ಲಯನ್ಸ್‌ ಅಧ್ಯಕ್ಷ ಡಾ| ನಾಗಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು  

Advertisement

Udayavani is now on Telegram. Click here to join our channel and stay updated with the latest news.

Next