Advertisement
ಬಾಳೆಯಲ್ಲಿ ಎಷ್ಟೋ ತಳಿಗಳಿವೆ. ಒಂದೊಂದು ತಳಿಗೂ ಒಂದೊಂದು ರುಚಿ. ಮೈಸೂರು ಬಾಳೆ, ಸಾಂಬಾರು ಬಾಳೆ, ಕದಳಿ, ಪಚ್ಚೆ ಬಾಳೆ, ಚಂದ್ರ ಬಾಳೆ, ನೇಂದ್ರ, ಗಾಳಿ, ಬೂದಿ, ಜೇನು ಬಾಳೆ, ಕಲ್ಲು ಬಾಳೆ, ರಸಬಾಳೆ, ಜಹಾಂಗೀರ್, ಸಹಸ್ರ ಬಾಳೆ- ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲ ಬಾಳೆಗಳು ಎಲ್ಲ ಊರುಗಳಲ್ಲಿ ಬೆಳೆದರೂ ಆಯಾಯ ಪ್ರದೇಶಕ್ಕೆ ಹೊಂದುವ ತಳಿಗಳು ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ, ಕರಾವಳಿ ಜಿಲ್ಲೆಗಳಲ್ಲಿ ಕದಳಿ, ನಂಜನಗೂಡಿನಲ್ಲಿ ರಸಬಾಳೆ, ಕೇರಳದಲ್ಲಿ ನೇಂದ್ರ, ತಮಿಳುನಾಡಿನಲ್ಲಿ ಪಚ್ಚೆ ಬಾಳೆ ಹೀಗೆ. ಅಂದ ಹಾಗೆ ನಮ್ಮೂರಿನ ಕದಳಿ ಬಾಳೆಯನ್ನು ಘಟ್ಟದ ಮೇಲಿನವರು ಏಲಕ್ಕಿ ಬಾಳೆ ಎಂಬ ಹೆಸರಿನಿಂದ ಕರೆಯುತ್ತಾರೆ.
ಕಳೆದ ಬೇಸಿಗೆಯಲ್ಲಿ ನಾನು, ಚಿಕ್ಕಮ್ಮ, ನನ್ನ ಇಬ್ಬರು ಗೆಳತಿಯರು ಕಾರು ಮಾಡಿಕೊಂಡು ಮುಂಜಾನೆ 4 ಗಂಟೆಗೆ ನನ್ನ ಮನೆಯಿಂದ ಕುವೆಂಪು ಅವರ ಊರು ಕುಪ್ಪಳಿಗೆ ಸ್ನೇಹಿತರ ಮಗಳ “ಮಂತ್ರಮಾಂಗಲ್ಯ’ ಮದುವೆ ಕಾರ್ಯಕ್ರಮಕ್ಕೆಂದು ಹೊರಟಿದ್ದೆವು. “ಹೊಟೇಲಿಗೆ ಹೋಗುವುದು ಬೇಡ. ಸಮಯ ಹಾಳಾಗುತ್ತದೆ. ಮನೆಯಿಂದ ತಿಂಡಿ ತರುವ. ಕಾರಲ್ಲೇ ತಿನ್ನುವ’ ಎಂದು ನಾವು ಮೊದಲೇ ಮಾತಾಡಿಕೊಂಡಿದ್ದೆವು. ನಾನು ಹಲಸಿನ ಹಣ್ಣಿನ ಇಡ್ಲಿ ಹಿಂದಿನ ರಾತ್ರಿ ಮಾಡಿ ತಂದಿದ್ದೆ. ನನ್ನ ಚಿಕ್ಕಮ್ಮ ಎಲೆಯಲ್ಲಿ ಮಡಚಿಟ್ಟ ತಿಂಡಿಯೊಂದನ್ನು ನಮಗೆಲ್ಲ ಕೊಟ್ಟರು. ಸಿಹಿ-ಖಾರ ಮಿಶ್ರಿತವಾಗಿದ್ದ ಅದನ್ನು ನನಗೆ ಮತ್ತು ನನ್ನ ಗೆಳತಿಯರಿಗೆ ಯಾವುದರಿಂದ ಮಾಡಿದ್ದೆಂದು ಕಂಡುಹಿಡಿಯಲಾಗಲಿಲ್ಲ. ಕೊನೆಗೆ ಚಿಕ್ಕಮ್ಮನೇ “ಇದು ಕುಂಡಿಗೆ (ಬಾಳೆ ಹೂವು)ಯಿಂದ ಮಾಡಿದ ಪತ್ರೊಡೆ’ ಎಂದು ಗುಟ್ಟು ಬಿಟ್ಟುಕೊಟ್ಟರು. ಅದರ ರುಚಿಗೆ ಮಾರುಹೋದ ನಮ್ಮಲ್ಲೊಬ್ಬಳು ಗೆಳತಿ ಈಗ ಕುಂಡಿಗೆ ಪತ್ರೊಡೆಯನ್ನು ತಿಂಗಳಿಗೊಮ್ಮೆಯಾದರೂ ಮಾಡುತ್ತಾಳಂತೆ. ಬಾಳೆಕಾಯಿ, ಬಾಳೆಹಣ್ಣು, ಬಾಳೆದಿಂಡು, ಕುಂಡಿಗೆ ಇವುಗಳಿಂದ ರುಚಿರುಚಿಯಾದ ಅಡುಗೆ ತಯಾರಿಸುವುದರಲ್ಲಿ ಮಲೆನಾಡು ಮತ್ತು ಕರಾವಳಿಯ ಗೃಹಿಣಿಯರದು ಎತ್ತಿದ ಕೈ.
Related Articles
Advertisement
ಬಾಳೆದಿಂಡಿನಲ್ಲಿನ ಫೈಬರ್ ಅಂಶವು ತೂಕ ಇಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಎಂದು ಆಯುರ್ವೇದದಲ್ಲಿ ಹೇಳಿದೆ. ಹಾಗಾಗಿ ನಾನು ಹೆಚ್ಚಾಗಿ ಬಾಳೆದಿಂಡಿನಿಂದ ತಯಾರಿಸಿದ ದೋಸೆ, ಪಲ್ಯ, ಮೊಸರುಗೊಜ್ಜು, ಸಾಂಬಾರ್ ಹೀಗೆ ಒಂದಲ್ಲ ಒಂದು ಅಡುಗೆಯನ್ನು ಮಾಡುತ್ತೇನೆ. ಬೇಸಿಗೆಯಲ್ಲಿ ಮೇವಿನ ಕೊರತೆ ಇರುವುದರಿಂದ ಬಾಳೆಡಿಂಡನ್ನು, ಬಾಳೆ ಎಲೆಯನ್ನು ಕೊಚ್ಚಿ ಹಸುಗಳಿಗೆ ಹಾಕಿದರೆ ಅವು ಪರಮ ಖುಷಿಯಿಂದ ತಿನ್ನುತ್ತವೆ. ಬಾಳೆ ಕಾಂಡದ ಪದರು ತೆಗೆದು ಬಿಸಿಲಿಗೆ ಒಣಗಿಸಿದರೆ ಬಳ್ಳಿ ಸಿದ್ಧವಾಗುತ್ತದೆ. ಈ ಬಳ್ಳಿಯನ್ನು ಹೂಮಾಲೆ ಕಟ್ಟಲು ಬಳಸುತ್ತಾರೆ. ಬಾಳೆಬಳ್ಳಿಯಿಂದ ಬ್ಯಾಗ್, ಮೇಜು, ಕುರ್ಚಿಗಳನ್ನೂ ತಯಾರಿಸುತ್ತಾರಂತೆ.
ನಿನ್ನೆ ನಮ್ಮ ಊರಿನ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿಗೆ ನನ್ನದೇ ವೃತ್ತಿ (ರೈತ)ಯ ಸ್ನೇಹಿತರೊಬ್ಬರು ಬಂದಿದ್ದರು. ಅವರು ನನ್ನಲ್ಲಿ ತಿಂಗಳ ಹಿಂದೆ ದಿನಪತ್ರಿಕೆಯೊಂದರಲ್ಲಿ ಬಂದ “ಮೌಲ್ಯವರ್ಧನೆ ಮಾಡಿ ಮಾರಿ’ ಎಂಬ ನನ್ನ ಪುಟ್ಟ ಬರಹವನ್ನು ಓದಿ ಪ್ರಭಾವಿತರಾಗಿ ಪಡೆದ ಸ್ವಾನುಭವವನ್ನು ವಿವರಿಸಿದರು.
ಅದರಲ್ಲಿ ನಾನು ಬಾಳೆಹಣ್ಣಿಗೆ ರೇಟು ಇಲ್ಲದಿದ್ದರೆ ಒಣಗಿಸಿ ಸುಕೇಳಿ ಮಾಡಿ ಮಾರಬಹುದು. ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಎಂದು ಬರೆದಿದ್ದೆ. ಅವರು, “ಅದರಂತೆ ಮಾಡಿ ಪ್ರಯೋಜನ ಪಡೆದೆ’ ಎಂದರು. “ಅದು ಹೇಗೆ?’ ಎಂದು ಕೇಳಿದೆ. “ಈಗ ಬಾಳೆಕಾಯಿಗೆ ಹೇಗೂ ಮಾರ್ಕೆಟ್ ಇಲ್ಲ. ಅದಕ್ಕೆ ಬಾಳೆಹಣ್ಣು ಒಣಗಿಸಿ ಕಾಲು ಕೇಜಿಯ ಪ್ಯಾಕೆಟ್ ಮಾಡಿ ಮಡಿಕೇರಿಗೆ ಕೊಂಡು ಹೋದೆ. ಹೊಟೇಲ್ ಒಂದಕ್ಕೆ ಹೋಗಿ “ಬೇಕಾ?’ ಎಂದು ಕೇಳಿದೆ. ಸ್ಯಾಂಪಲ್ಲಿಗೆಂದು ಅಲ್ಲೇ ಇದ್ದ ಅವರ ಮಗುವಿಗೆ ಎರಡು ತುಂಡು ಕೊಟ್ಟೆ. ಮಾಲೀಕರು ಸುರುವಿಗೆ ಬೇಡವೆಂದರು. ಆದರೆ, ರುಚಿ ಹಿಡಿದ ಮಗು ಕೇಳಲಿಲ್ಲ. ಬೇಕೇಬೇಕೆಂದು ಹಠ ಮಾಡಿತು. ಮಗುವಿಗೋಸ್ಕರ ಅವರು ತೆಗೆದುಕೊಂಡರು. ತಿಂದ ಮೇಲೆ ಅವರಿಗೂ ಅದು ಇಷ್ಟವಾಯಿತು. ಇನ್ನೊಮ್ಮೆ ತರಲು ಹೇಳಿದರು. ಇನ್ನೂ ಒಂದೆರಡು ಅಂಗಡಿಯಲ್ಲಿ ಸ್ಯಾಂಪಲ್ ತೋರಿಸಿದೆ. ಅವರೂ ಮೆಚ್ಚಿಕೊಂಡರು. ವಿಪರೀತ ಚಾಕ್ಲೇಟ್ ತಿನ್ನುತ್ತಿದ್ದ ನನ್ನ ಮಗನೂ ಈಗ ಶಾಲೆ ಬಿಟ್ಟು ಮನೆಗೆ ಬಂದ ನಂತರ ಸುಕೇಳಿಯನ್ನೇ ತಿನ್ನಲು ಶುರುಮಾಡಿದ್ದಾನೆ. ಚಾಕ್ಲೇಟ್ ತಿನ್ನುವುದು ಮರೆತುಹೋಗಿದೆ’ ಎಂದರು. ನನಗೆ ಆಗ ಅನಿಸಿತು ನಮ್ಮ ರೈತರಿಗೆ ಸಂಕಲ್ಪ$ಶಕ್ತಿಯ ಕೊರತೆ ಇದೆ. ಚಳಿ ಬಿಟ್ಟು ಉತ್ಪನ್ನಗಳ ಮೌಲ್ಯವರ್ಧನೆಗೆ ಇಳಿದರೆ ಯಶಸ್ಸು ಸಿಗುವುದು ಖಂಡಿತ. ಈ ನಿಟ್ಟಿನಲ್ಲಿ ಸರ್ಕಾರದ ಪ್ರೋತ್ಸಾಹವೂ ಬೇಕು. ಮೌಲ್ಯವರ್ಧನೆಗೆ ಬೇಕಾದ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೆಕು.
ನಾನು ಅಜ್ಜನಮನೆಗೆ ಹೋದರೆ ಅತ್ತೆ ಆದರದಿಂದ ಬರಮಾಡಿಕೊಳ್ಳುತ್ತಾರೆ. ನನಗೆ ಟೀ ಕೊಡುವಾಗ ತಟ್ಟೆಯಲ್ಲಿ ಮೂರ್‍ನಾಕು ತುಂಡು ಬಾಳೆಹಣ್ಣಿನ ಹಲ್ವವೂ ಜೊತೆಗಿರುತ್ತದೆ. ಮನೆ ತುಪ್ಪದಿಂದ ತಯಾರಿಸಿದ ಘಮಘಮ ಪರಿಮಳ ಬರುವ ಆ ಹಲ್ವವನ್ನು ಕಂಡ ಕೂಡಲೇ ನನ್ನ ಬಾಯಿಯಲ್ಲಿ ನೀರೂತ್ತದೆ. ಕೆಲವೇ ಕ್ಷಣದಲ್ಲಿ ತಟ್ಟೆ ಖಾಲಿಯಾಗಿ ಬಿಡುತ್ತದೆ.
ವರ್ಷದ ಎಲ್ಲಾ ದಿನಗಳಲ್ಲಿಯೂ ಬಾಳೆಹಣ್ಣು ಹಲ್ವ ಅತ್ತೆಯ ಅಡುಗೆಮನೆ ಡಬ್ಬಿಯಲ್ಲಿ ಇದ್ದೇ ಇರುತ್ತದೆ. ಇದು ಹೇಗೆ ಅಂತೀರಾ? ವಿಷಯ ಇರುವುದು ಇಲ್ಲಿ. ಅತ್ತೆ ತಮ್ಮ ತೋಟದಲ್ಲಿ ಬೆಳೆಯುವ ಬಾಳೆಗೊನೆಯನ್ನು ಹಾಗೆ ಮಾರುವುದಿಲ್ಲ. ಹಲ್ವ ತಯಾರಿಸಿ ಮಾರುತ್ತಾರೆ. ಬೇಸಿಗೆಯಲ್ಲಿ ಮಾವಿನಹಣ್ಣು ಮಾರುಕಟ್ಟೆಯನ್ನು ಆಳುವುದರಿಂದ ರೈತರು ಬಾಳೆಹಣ್ಣು ಮಾರಾಟ ಮಾಡುವಾಗ ಕ್ರಯ ಇರುವುದಿಲ್ಲ. ಆದರೆ ಹಲ್ವ ತಯಾರಿಸಿ ಮಾರಿದರೆ ಒಳ್ಳೆ ಬೆಲೆ ಸಿಗುತ್ತದೆ ಎಂಬುದು ಅತ್ತೆಯ ಅನುಭವ. ಒಂದು ಕೇಜಿ ಹಲ್ವ ಮಾಡಲು ಒಂದೂವರೆ ಕೇಜಿ ಬಾಳೆಹಣ್ಣು ಬೇಕು ಎಂದು ಅವರು ಹೇಳುತ್ತಾರೆ.
ಒಟ್ಟಿನಲ್ಲಿ ಕೃಷಿಕರ ಆರ್ಥಿಕ ಪ್ರಗತಿಗೆ ಬಾಳೆ ನೆರವಾಗುತ್ತದೆ. ಬಾಳೆ ಬೆಳೆದು ಬದುಕು ಬಂಗಾರವಾಗಿಸಿದ ಅದೆಷ್ಟೋ ರೈತರು ನಮ್ಮ ಕಣ್ಣ ಮುಂದೆ ಇದ್ದಾರೆ.
ಸಹನಾ ಕಾಂತಬೈಲು