Advertisement

ಬೇಲೂರಿನ ಊಟ “ಚೆನ್ನ’

07:50 PM Dec 27, 2019 | Lakshmi GovindaRaj |

ಬೇಲೂರಿನ ಶ್ರೀ ಚನ್ನಕೇಶವ ದೇಗುಲ ನೋಡಿದವರೆಲ್ಲ, ಅಲ್ಲಿನ ವಾಸ್ತುಶಿಲ್ಪದ ಮೋಡಿಗೆ ಬೆರಗಾಗುತ್ತಾರೆ. ಹೊಯ್ಸಳ ಶಿಲ್ಪಕಾರರ ಕಲಾಕುಸುರಿಯ ಮಾಯಾ ಸೊಬಗು ಅಂಥದ್ದು. ನಿಮಗೆ ಗೊತ್ತೇ? ಅದೇ ಚನ್ನಕೇಶವನ ದೇಗುಲ ಕಣ್ಣಿಗೆ ಹೇಗೆ ಹಬ್ಬವೋ, ಹೊಟ್ಟೆಗೂ ಹಬ್ಬವೇ. ಇಲ್ಲಿ ನಡೆಯುವ ನಿತ್ಯದ ದಾಸೋಹದ್ದು ನೆನಪಿನಲ್ಲಿ ದಾಖಲಾಗುವಂಥ ರುಚಿ.

Advertisement

ಇಲ್ಲಿ ಅನ್ನಸಂತರ್ಪಣೆ ಶುರುವಾಗಿದ್ದು, ತೀರಾ ಇತ್ತೀಚಿಗಿನ ವರ್ಷಗಳಲ್ಲಿ. 10 ವರ್ಷಗಳ ಹಿಂದೆ ಶಿವರುದ್ರಪ್ಪನವರು ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾಗಿದ್ದಾಗ, ಭಕ್ತರಿಗೆ ಊಟದ ವ್ಯವಸ್ಥೆಯನ್ನು ಆರಂಭಿಸಿದ್ದರು. ಈಗ ಇಲ್ಲಿನ ಭೋಜನಪ್ರಸಾದ, ಭಕ್ತರಲ್ಲದೆ, ಪ್ರವಾಸಿಗರಿಂದಲೂ “ಭಲೇ’ ಎನ್ನಿಸಿಕೊಂಡಿದೆ.

ನಿತ್ಯದ ಅನ್ನಸಂತರ್ಪಣೆ: ಚನ್ನಕೇಶವನ ಮೇಲೆ ಭಕ್ತಿಗಲ್ಲದೆ, ಕಲಾಪ್ರೀತಿಯಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನಿತ್ಯ ಕನಿಷ್ಠ 3 ಸಾವಿರ ಭಕ್ತರು, ಭೋಜನ ಪ್ರಸಾದವನ್ನು ಸವಿಯುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ಹೆಚ್ಚುತ್ತದೆ.

ಸುಸಜ್ಜಿತ ಪಾಕಮನೆ: ಇಲ್ಲಿನ ಅಡುಗೆಮನೆ, ಆಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. 7 ಬೃಹತ್‌ ಬಾಯ್ಲರ್‌ಗಳು ಬಳಕೆಯಾಗುತ್ತವೆ. ಗ್ಯಾಸ್‌ ಅಲ್ಲದೆ, ಸೌದೆ ಒಲೆಗಳಲ್ಲೂ ಅಡುಗೆ ಮಾಡಲಾಗುತ್ತದೆ.

ಭಕ್ಷ್ಯ ಸಮಾಚಾರ
– ನಿತ್ಯವೂ ಅನ್ನ- ಸಾಂಬಾರ್‌, ಪಾಯಸ, ಮೊಸರನ್ನಗಳು ಪ್ರಮುಖ ಭಕ್ಷ್ಯಗಳು.
– ಬೇಸಿಗೆ ಸಮಯದಲ್ಲಿ ಮಜ್ಜಿಗೆ, ಆಲೂಗಡ್ಡೆ, ಕುಂಬಳಕಾಯಿ, ಸಿಹಿ ಕುಂಬಳಗಳನ್ನು ಹೆಚ್ಚು ಬಳಸುತ್ತಾರೆ.
– ಈರುಳ್ಳಿ, ಬೆಳ್ಳುಳ್ಳಿಗಳ ಬಳಕೆ ನಿಷಿದ್ಧ.
– ಟೇಬಲ್‌ ಊಟ, ಸ್ಟೀಲ್‌ ತಟ್ಟೆಗಳ ಬಳಕೆ.
– ಊಟದ ನಂತರ ಭಕ್ತಾದಿಗಳೇ ತಟ್ಟೆ ತೆಗೆಯುವ ಪದ್ಧತಿ ರೂಢಿಯಲ್ಲಿದೆ.
– ಏಕಕಾಲದಲ್ಲಿ 360 ಮಂದಿ ಊಟ ಮಾಡಬಹುದು.

Advertisement

ಊಟದ ಸಮಯ
– ಮಧ್ಯಾಹ್ನ 1ರಿಂದ 3 ಗಂಟೆ.
– ರಾತ್ರಿ ಊಟದ ವ್ಯವಸ್ಥೆ ಇರುವುದಿಲ್ಲ.

ಏಕಾದಶಿಗೆ ಉಪಾಹಾರ: ಇಲ್ಲಿ ವರ್ಷದ 365 ದಿನಗಳೂ ಅನ್ನಪ್ರಸಾದ ವಿನಿಯೋಗ ನಡೆಯುತ್ತದೆ. ಚೈತ್ರ ಮಾಸದಲ್ಲಿ ನಡೆಯುವ ರಥೋತ್ಸವದಲ್ಲಿ 2 ದಿನ ಮಾತ್ರ ಊಟದ ವ್ಯವಸ್ಥೆ ಇರುವುದಿಲ್ಲ. ಅಂದು ಪುಳಿಯೊಗರೆ, ಸಿಹಿ ಪೊಂಗಲ್‌, ಮೊಸರನ್ನ ನೀಡುತ್ತಾರೆ. ಈ ಎರಡು ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು, ಪ್ರಸಾದ ಸವಿಯುತ್ತಾರೆ.

ಸಂಖ್ಯಾ ಸೋಜಿಗ
2- ಬಾಣಸಿಗರಿಂದ ಅಡುಗೆ
3- ಕ್ವಿಂಟಲ್‌ ಅಕ್ಕಿ, ನಿತ್ಯ ಬಳಕೆ
15- ಸಹಾಯಕರ ನೆರವು
110- ಕಿಲೋ ತರಕಾರಿ, ಸಾಂಬಾರ್‌ಗೆ ಬಳಕೆ
200- ಲೀ. ಸಾಂಬಾರ್‌ ಅವಶ್ಯ
3000- ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
1,00,000- ಮಂದಿಯಿಂದ ಕಳೆದವರ್ಷ ಭೋಜನ ಸ್ವೀಕಾರ

ಬೇಲೂರು ಚನ್ನಕೇಶವನ ಸನ್ನಿಧಿ ಶಿಲ್ಪಕಲೆಗಳ ತವರಿನ ಜೊತೆಗೆ ಉತ್ತಮ ದಾಸೋಹಕ್ಕೆ ಹೆಸರಾದ ತಾಣವೂ ಹೌದು. ಆಡಳಿತ ಮಂಡಳಿಯ ಸದಸ್ಯರ ಜೊತೆಗೆ ಸದ್ಭಕ್ತರೂ ದಾಸೋಹಕ್ಕೆ ಸಹಾಯಹಸ್ತ ನೀಡುತ್ತಿದ್ದಾರೆ.
-ವಿದ್ಯುಲತಾ, ಸಿಇಒ, ಚನ್ನಕೇಶವ ದೇಗುಲ

ಹತ್ತು ವರ್ಷಗಳಿಂದ ಇಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದೇನೆ. ಅನ್ನದಾನದ ಸೇವೆ ಮನಸ್ಸಿಗೆ ವಿಶೇಷ ಉಲ್ಲಾಸ ನೀಡುತ್ತಿದೆ. ಶುಚಿ- ರುಚಿಯ ಅಡುಗೆ ನಮ್ಮ ಆದ್ಯತೆ.
-ಬಿ.ಸಿ. ಸಂತೋಷ, ಪ್ರಧಾನ ಬಾಣಸಿಗ

* ಡಿ.ಬಿ. ಮೋಹನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next