Advertisement
ಈಶ್ವರಮಂಗಲ ಮತ್ತು ಗಾಳಿಮುಖ ಪೇಟೆಗಳು ನೆಟ್ಟಣಿಗೆ ಮುಟ್ನೂರು ಸೇರಿದಂತೆ ಎರಡು ರಾಜ್ಯಗಳ ಗಡಿ ಭಾಗದ ಜನರಿಗೂ ಪ್ರಮುಖ ಪೇಟೆಗಳು. ಶೈಕ್ಷಣಿಕ, ವೈದ್ಯಕೀಯ, ಬ್ಯಾಕಿಂಗ್, ಧಾರ್ಮಿಕ, ಸಾಂಸ್ಕೃತಿಕವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶ ವಿದು. ಕನ್ನಡ, ತುಳು, ಮಲಯಾಳ, ಬ್ಯಾರಿ ಭಾಷೆ, ಕೊಂಕಣಿ, ಕರಾಡ್ಹ ಭಾಷೆ ಮಾತನಾಡುವರ ಸಂಖ್ಯೆ ಹೆಚ್ಚಿದೆ. ತುಳು ವ್ಯವಹಾರದ ಭಾಷೆಯಾಗಿ ಬಳಸು ವುದು ಕೊಂಚ ಹೆಚ್ಚು. ಗ್ರಾಮವು 2,343.23 ಹೆಕ್ಟೇರ್ ಭೂಭಾಗ ಹೊಂದಿದೆ. ಈ ಪೈಕಿ 480 ಹೆಕ್ಟೇರ್ ಅರಣ್ಯ ಪ್ರದೇಶ. 1,646 ಮನೆಗಳಿದ್ದು, 2011 ಜನಗಣತಿ ಪ್ರಕಾರ 8,447 ಜನಸಂಖ್ಯೆ. ಶೇ. 75.85 ಸಾಕ್ಷರತೆ ಹೊಂದಿರುವ ಗ್ರಾಮವಿದು. ಅಡಿಕೆ, ತೆಂಗು, ರಬ್ಬರ್, ಕರಿಮೆಣಸು ಬೆಳೆ ಇಲ್ಲಿನ ಆರ್ಥಿಕ ಶಕ್ತಿ.
Related Articles
Advertisement
ಪಳ್ಳತ್ತೂರು ಮೂಲಕ ಅಲ್ಲದೇ ಪಂಚೋಡಿ ಕರ್ನೂರು ಮೂಲಕ, ಮಯ್ನಾಳ , ಮೆಣಸಿನ ಕಾನ ಮೂಲಕ ಕೇರಳ ಸಂಪರ್ಕಿಸಬಹುದು. ಮೇನಾಲ ಮಯ್ನಾಳ ರಸ್ತೆ ಮೂಲಕ ಕೇರಳವನ್ನು ಸಂಪರ್ಕಿಸುವ ರಸ್ತೆ ದುರಸ್ತಿಗೊಳ್ಳುತ್ತಿದ್ದು, ವಿಳಂಬದಿಂದ ವಿದ್ಯಾರ್ಥಿಗಳಿಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಪೊಲೀಸ್ ಠಾಣೆಗೆ ಶಾಶ್ವತ ಕಟ್ಟಡ
ಪುತ್ತೂರು ತಾಲೂಕಿನ ಏಕೈಕ ಪೊಲೀಸ್ ಹೊರಠಾಣೆಗೆ ಈಶ್ವರಮಂಗಲದಲ್ಲಿ ಸ್ಥಳ ಕಾಯ್ದಿರಿಸಲಾಗಿದೆ. ಆದರೆ ಬಾಡಿಗೆ ಕೊಠಡಿಯಲ್ಲಿರುವ ಠಾಣೆಗೆ ಶಾಶ್ವತ ಕಟ್ಟಡ ನಿರ್ಮಿಸಬೇಕಿದೆ. ಗೃಹ ಸಚಿವರು ಅನುದಾನ ಬಿಡುಗಡೆ ಮಾಡಬೇಕಿದೆ. ಅನುದಾನ ಸಿಕ್ಕರೆ ಹೊಸ ಕಟ್ಟಡ ನಿರ್ಮಾಣವಾಗಲಿದೆ.
ಶಾಶ್ವತ ವೈದ್ಯಾಧಿಕಾರಿಗಳ ಬೇಡಿಕೆ
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸಜ್ಜಿತವಾಗಿದ್ದು ಶಾಶ್ವತ ವೈದ್ಯಾಧಿಕಾರಿಗಳು ಪಾಣಾಜೆ ಆರೋಗ್ಯ ಕೇಂದ್ರಕ್ಕೆ ಪ್ರಭಾರ ಹೊಣೆಯಲ್ಲಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ.
ಪಶು ಚಿಕಿತ್ಸಾ ಕೇಂದ್ರವನ್ನು ಪುನರ್ ನಿರ್ಮಿಸಲಾಗುತ್ತಿದೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಯತ್ನಿಸಬೇಕು.
ಗ್ರಾಮ ಪಂಚಾಯತ್ ಬಳಿಯ ಹಳೆಯ ಪಂಚಾಯತ್ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ರಚಿಸಲು ಪಂಚಾಯತ್ ಕಾರ್ಯಯೋಜನೆಯನ್ನು ರೂಪಿಸಿದೆ. ಪಂಚಾಯತ್ ಪಿಡಿಒ ಅವರನ್ನು ಬೆಟ್ಟಂಪಾಡಿ ಗ್ರಾಮಕ್ಕೆ ಪ್ರಭಾರವಾಗಿ, ಕಾರ್ಯದರ್ಶಿ ಹುದ್ದೆ ಖಾಲಿ ಇದ್ದು ಭರ್ತಿ ಮಾಡಬೇಕಾಗಿದೆ.
ಗ್ರಾಮದಲ್ಲಿ ಏಕೈಕ ಸರಕಾರಿ ಪ್ರೌಢಶಾಲೆ ಇದ್ದು ಮಕ್ಕಳ ಸಂಖ್ಯೆ ಹೆಚ್ಚಿದೆ. ಸಭಾಂಗಣ ಕಾಮಗಾರಿಯೂ ಶೀಘ್ರವೇ ಮುಗಿಯಬೇಕಿದೆ. ಆಟದ ಮೈದಾನ ಆವಶ್ಯಕತೆ ಇದೆ. ಪದವಿಪೂರ್ವ ಕಾಲೇಜು ಸಹ ನಿರ್ಮಾಣವಾಗಬೇಕಿದೆ.
ಗಡಿಭಾಗದ ಮಿಂಚಿಪದವು ಎಂಬಲ್ಲಿ ಎಂಡೋಸಲ್ಫಾನ್ ಸುರಿದ ಭಾಗವನ್ನು ತೆಗೆಯುವ ಕಾರ್ಯ ಬಾಕಿ ಪಟ್ಟಿಯಲ್ಲಿದೆ.
ಇದರೊಂದಿಗೆ ಸುಳ್ಯಪದವಿನಲ್ಲಿ ಹಿಂದೆ ನಡೆದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ದಲ್ಲಿ ಪಂಚಾಯತ್ ಮನವಿ ಮಾಡಿದಾಗ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆದರೆ ಇದುವರೆಗೂ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ.
ಮುಖ್ಯ ಬೇಡಿಕೆಗಳು: ಈಶ್ವರಮಂಗಲ ಪೇಟೆಯಲ್ಲಿ ಸಂತೆ ಮತ್ತು ಮೀನಿನ ಮಾರುಕಟ್ಟೆ, ಸುರುಳಿಮೂಲೆ ಪ್ರೌಢಶಾಲೆಯ ಬಳಿ ಔಷಧಿಯ ಪಾರ್ಕ್,ಈಶ್ವರಮಂಗಲದಲ್ಲಿ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ,ಎಪಿಎಂಸಿ ಗೋದಾಮು ನಿರ್ಮಾಣದಂಥ ಯೋಜನೆಗಳು ಈಡೇರಬೇಕಿವೆ. ತಾಲೂಕಿಗೆ ಮಾದರಿ ಗ್ರಾಮದ ಸಂಕಲ್ಪದೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. –ಎ.ರಮೇಶ್ ರೈ ಸಾಂತ್ಯ, ಅಧ್ಯಕ್ಷರು, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.
ಎಲ್ಲ ವಿಧದಲ್ಲಿ ಅಭಿವೃದ್ಧಿ: ಕೇರಳ-ಕರ್ನಾಟಕ ಗಡಿಭಾಗದ ಜನರು ಈಶ್ವರಮಂಗಲ ಪೇಟೆಯನ್ನೇ ಅವಲಂಬಿಸಿದ್ದಾರೆ. ಮೂಲ ಸೌಕರ್ಯವನ್ನು ಒದಗಿಸಬೇಕಿದೆ. ಕರ್ನಾಟಕ ದಿಂದ ಕೇರಳದ ದೇಲಂಪಾಡಿ ಮಯ್ನಾಳ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಗೊಳಿಸಬೇಕು. ಈಶ್ವರಮಂಗಲ ಎಲ್ಲ ವಿಧದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. –ಸಂತೋಷ್, ಸ್ಥಳೀಯ ನಿವಾಸಿ
ಸೌಹಾರ್ದದ ಸಂಕೇತ
ನೆಟ್ಟಣಿಗೆ ಮುಟ್ನೂರು ಗ್ರಾಮದ ಹೃದಯಭಾಗ ಈಶ್ವರ ಮಂಗಲದ ಮೆ| ಉಣ್ಣಿಕೃಷ್ಣನ್ ವೃತ್ತ ಸೌಹಾರ್ದವನ್ನು ಸಾರುತ್ತಿದೆ. ಪುತ್ತೂರು, ಸುಳ್ಯಪದವು ಮತ್ತು ಪಳ್ಳತ್ತೂರು ರಸ್ತೆ ಈ ವೃತ್ತವನ್ನು ಸೇರುತ್ತದೆ. ಹಿಂದೂ, ಮುಸ್ಲಿಂ ಆಚರಿಸುವ ಹಬ್ಬ ಹರಿದಿನಗಳಲ್ಲಿ ಈ ವೃತ್ತ ಆಲಂಕಾರಗೊಂಡು ಈಶ್ವರಮಂಗಲ ಪೇಟೆಗೆ ಶೋಭೆ ತರುತ್ತದೆ. ಎರಡು ಧರ್ಮದ ಆಚರಣೆ ಶಾಂತಿಯುತವಾಗಿ ನಡೆಯುತ್ತದೆ.ಸೌಹಾರ್ದತೆಯನ್ನು ಸಾರುತ್ತದೆ.
-ಮಾಧವ ನಾಯಕ್ ಕೆ.