ಬೆಂಗಳೂರು : ಮೀ ಟೂ ಆರೋಪ ಮಾಡಿ ನಟ ಅರ್ಜುನ್ ಸರ್ಜಾ ವಿರುದ್ಧ ಸಮರ ಸಾರಿರುವ ನಟಿ ಶ್ರುತಿ ಹರಿಹರನ್ ಪೊಲೀಸ್ ಠಾಣೆಯ ಮೆಟ್ಟಿಲೇರಿ ಲೈಂಗಿಕ ಕಿರುಕುಳ ನೀಡಿದ ದೂರನ್ನು ದಾಖಲಿಸಿದ್ದಾರೆ.
ಶನಿವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಕೀಲರೊಂದಿಗೆ ಆಗಮಿಸಿದ ಶ್ರುತಿ ಹರಿಹರನ್ ದೂರು ದಾಖಲಿಸಿದ್ದಾರೆ. ಬರೋಬ್ಬರಿ 5 ಪುಟಗಳಷ್ಟು ದೂರಿನ ಪ್ರತಿಯನ್ನು ಶ್ರುತಿ ಸಲ್ಲಿಸಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಸೆಕ್ಷನ್ 354(ಲೈಂಗಿಕ ಕಿರುಕುಳ), ಸೆಕ್ಷನ್ 354 ಎ (ಮಾನಹಾನಿಗೆ ಯತ್ನ) 509 ( ಮಾನಹಾನಿಕರ ನಿಂದನೆ )ರಡಿ ಎಫ್ಐಆರ್ ದಾಖಲು ಮಾಡಲಾಗಿದೆ.
2015 ರಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ಯುಬಿ ಸಿಟಿಯ ಪಬ್‌ವೊಂದರಲ್ಲಿ ನನ್ನ ತೊಡೆ ಮತ್ತು ಪ್ರಷ್ಠ ಭಾಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದು, ನಾನು ಅಂದು ಮೌನವಾಗಿ ನರಳಿದೆ.ನನಗೆ ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಆಗಲಿಲ್ಲ. ಯಾಕೆಂದರೆ ನಾನು ಆಗಷ್ಟೆ ಬೆಳೆಯುತ್ತಿರುವ ನಟಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ಚಿತ್ರರಂಗ ಮತ್ತು ಹೊರಗಡೆಯೂ ಪ್ರಭಾವೀ ವ್ಯಕ್ತಿಯಾಗಿದ್ದರು. ನಾನು ಪ್ರತಿಕ್ರಿಯಿಸುವ ಮುನ್ನವೇ ಅವರು ಮತ್ತೊಮ್ಮೆ ನನ್ನ ಬರಸೆಳೆದರು. ನನ್ನನ್ನು ತೋಳಿನಿಂದ ಬಳಸಿಕೊಂಡು ಶೂಟಿಂಗ್‌ಗೆ ಕಳುಹಿಸಿದರು ಎಂದು ಹೇಳಿಕೊಂಡಿದ್ದಾರೆ.