ಶಿವಮೊಗ್ಗ : ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿರುವುದು.ಸಾವರ್ಕರ್ ಫೋಟೋ ಹರಿದು ಹಾಕಿದ್ದು ನಾನೇ.ಆರಾಮವಾಗಿ ಹೋಗುತ್ತಿದ್ದ ಪ್ರೇಮಸಿಂಗ್ ಗೆ ಚಾಕು ಹಾಕಿಸಿದ್ದು ನಾನೇ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರ ಆರೋಪಕ್ಕೆ
ಶುಕ್ರವಾರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನೇರವಾಗಿ ಕಾಣುತ್ತಿದೆ, ಕಾಂಗ್ರೆಸ್ ನ ಕಾರ್ಪೊರೇಟರ್ ಗಂಡ ಸಾವರ್ಕರ್ ಫೋಟೊ ಹರಿದು ಹಾಕಿದ್ದಾರೆ.ಇದು ಗೊತ್ತಿದ್ದರೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಗೆ ಕ್ಷಮೆ ಕೇಳುವ ಸೌಜನ್ಯ ಇಲ್ಲ. ಆದಾಗ್ಯೂ ಗಲಾಟೆಗೆ ನಾನೇ ಕಾರಣ ಎನ್ನುವವರಿಗೆ ಇನ್ನೇನು ಹೇಳಲಿ.ಹೌದು ನಾನೇ, ಭಂಡರಿಗೆ ಭಂಡತನದ ಉತ್ತರ ಕೊಡಬೇಕಾಗುತ್ತದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ರಾಜ್ಯದ ನಾಯಕರು, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಸೇರಿ ಎಲ್ಲರೂ ಈ ರೀತಿ ಮಾಡಬೇಡಿ ಎಂದು ಹೇಳಿದ್ದಾರೆ,ನಾನು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎಂದರು.
ಸಿದ್ದರಾಮಯ್ಯ ಜತೆ ಟ್ವೀಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣ ಅಂದ ಮೇಲೆ ಟ್ವೀಟ್ ವಾರ್, ಎದುರು ಟೀಕೆ ಎಲ್ಲಾ ನಡೆಯುತ್ತದೆ.ಒಬ್ಬರಿಗೊಬ್ಬರು ಹೊಗಳಲು ರಾಜಕಾರಣ ಮಾಡಲ್ಲ.ಅವರು ನಮಗೆ ಬೈಯ್ಯೋದು.. ನಾವು ಅವರಿಗೆ ಬೈಯ್ಯೋದು ಇದೇ ರಾಜಕಾರಣ.ನಾವು ತಪ್ಪು ಮಾಡಿದ್ದನ್ನು ಅವರು ಹೇಳುತ್ತಾರೆ. ಅವರು ತಪ್ಪು ಮಾಡಿದ್ದನ್ನು ನಾವು ಹೇಳುತ್ತೇವೆ. ನಾವು ಮಾಡಿದ ಕೆಲಸವನ್ನೆಲ್ಲ ಅವರು ಹೊಗಳುತ್ತಾರಾ? ಅವರು ಮಾಡಿದ್ದನ್ನು ನಾವು ಹೊಗಳುತ್ತೇವಾ ಎಂದು ಪ್ರಶ್ನಿಸಿ, ಆಡಳಿತ ದೃಷ್ಟಿಯಿಂದ ಟೀಕೆ ಮಾಡಿದ್ದು ಒಳ್ಳೆಯದು ಇದ್ದರೆ ನಾವು ತೆಗೆದುಕೊಳ್ಳುತ್ತೇವೆ ಎಂದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರ, ಅವರು ಪಕ್ಷ ಬದುಕಿರೋದನ್ನು ತೋರಿಸಲು ಬೇಕಾದ್ದನ್ನು ಮಾಡಲಿ. ನಾವು ವಿರೋಧ ಪಕ್ಷದಲ್ಲಿದ್ದಾಗ ಸಾಕಷ್ಟು ಕಾರ್ಯಕ್ರಮ ಮಾಡಿದ್ದೆವು. ಪಾಪ ಅವರು ಮಲಗಿಕೊಂಡಿದ್ದರು. ಈಗ ಅವರಿಬ್ಬರೂ ನಾನೇ ಮುಖ್ಯಮಂತ್ರಿ ಎಂದು ಬಡಿದಾಡುತ್ತಿದ್ದಾರೆ.ಚಿತ್ರದುರ್ಗದ ಜಾತಿ ಸಭೆಯಲ್ಲೂ ಅವರಿಬ್ಬರೂ ಬಡಿದಾಡಿದ್ದಾರೆ.ಅವರ ಸ್ವಾಮಿಗಳು ಇವರಿಬ್ಬರಲ್ಲಿ ಒಬ್ಬರಾಗಲಿ ಅಂತಾರೆ.
ನಾನು ಬಿಟ್ಟರೆ ಮುಖ್ಯಮಂತ್ರಿ ಆಗೋರು ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಅಂತಾರೆ. ಅಧಿಕಾರದ ಆಸೆಗೆ ಈ ದೇಶ ತುಂಡಾಯ್ತು.ಇಡೀ ಹಿಂದುಸ್ಥಾನ ಒಟ್ಟಾಗಿರಬೇಕು ಅಂತ ಅನೇಕ ಮಹಾಪುರುಷರು ಹೋರಾಟ ಮಾಡಿದರು. ಪಾಕಿಸ್ತಾನ, ಹಿಂದುಸ್ಥಾನ ಆಗಲು ಬೇರೆ ಯಾವ ಕಾರಣವೂ ಅಲ್ಲ.ಅಂದಿನ ಕಾಂಗ್ರೆಸ್ ನ ಕೆಲವರು ಮಾಡಿದ್ದು.ಅದೇ ದಿಕ್ಕಿನಲ್ಲಿ ಅಧಿಕಾರದ ಆಸೆಗೆ ಡಿಕೆಶಿ, ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕಿಡಿ ಕಾರಿದರು.