Advertisement

ಎಂಸಿಎಸ್‌ ಬ್ಯಾಂಕ್‌ ಸಹಕಾರ ಸಪ್ತಾಹ ಸಮಾರೋಪ

01:47 PM Nov 23, 2017 | Team Udayavani |

ಮೂಡಬಿದಿರೆ: ಕೃಷಿ ರಂಗದಲ್ಲಿ ಈಗ ನಡೆಯುತ್ತಿರುವ ಆವಿಷ್ಕಾರಗಳು, ಲಭ್ಯವಿರುವ ಯಂತ್ರೋಪಕರಣಗಳನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಕೃಷಿ ರಂಗದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ ಎಂಬುದನ್ನು ನಮ್ಮ ಯುವಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.

Advertisement

ಕೃಷಿ ಬದುಕು ಉಳಿದಾಗ ಮಾತ್ರ ಸಹಜ ಬದುಕು. ಹಾಗೂ ಅದರೊಂದಿಗೆ ಹೊಂದಿಕೊಂಡಿರುವ ಸಾಂಸ್ಕೃತಿಕ ನೆಲೆಗಳು ಉಳಿದುಕೊಳ್ಳಲು ಸಾಧ್ಯ ಎಂದು ವಾಗ್ಮಿ, ಜೈನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.

ಮೂಡಬಿದಿರೆ ಕೋ-ಓಪರೇಟಿವ್‌ ಸರ್ವಿಸ್‌ ಬ್ಯಾಂಕ್‌ನಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಸಪ್ತ ಸಂಧ್ಯಾ -ಚಿಂತನ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೃಷಿ ಮತ್ತು ಯುವಜನತೆ’ ಕುರಿತು ಮಾತನಾಡಿದ ಅವರು, ಪೇಟೆಯಲ್ಲಿ ನಾಲ್ಕೈದು ಸಾವಿರ ರೂ. ಸಂಬಳಕ್ಕೆ ದುಡಿ ಯುವ ಬದಲು ಹಳ್ಳಿಯಲ್ಲಿ ಈಗಿನ ಧಾರಣೆಯಂತೆ ಕನಿಷ್ಠ 10- 12 ಸಾವಿರ ರೂ. ಸಂಪಾದಿಸಲು ಸಾಧ್ಯ ಎಂಬುದನ್ನು ವಿದ್ಯಾವಂತ ಗ್ರಾಮೀಣ ಯುವಜನರು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಪಟ್ಟಣಗಳಲ್ಲಿ ಜಿಮ್‌ ಕಸರತ್ತು, ವಾಕಿಂಗ್‌ ಮೂಲಕ ಪಡೆಯುವುದನ್ನೆಲ್ಲ ನಮ್ಮ ರೈತರು ತಮ್ಮ ನಿತ್ಯದ ಚಟುವಟಿಕೆಗಳಿಂದ ಪಡೆಯುತ್ತಾರೆ. ಆ ಕಾರಣಕ್ಕಾಗಿಯೇ ಅವರ ಆರೋಗ್ಯ ಸಹಜವಾಗಿ ಉತ್ತಮವಾಗಿರುತ್ತದೆ ಮತ್ತು ಶರೀರ ಸದೃಢವಾಗಿರುತ್ತದೆ.

ಹಳ್ಳಿಯ ಬದುಕು ಪೇಟೆಯ ಕೃತಕತೆ ಯನ್ನು ಹೊದ್ದು ಕೊಂಡಿಲ್ಲ. ಮರ, ಗಿಡ, ಜಾನುವಾರು ಸಹಿತ ಜನರನ್ನು ಮಾತನಾಡಿಸುತ್ತಲೇ ಇರುವ ಹಳ್ಳಿಗರೆಂದೂ ಪೇಟೆಯವರಂತೆ ಏಕಾಂಗಿತನದಿಂದ ಬಳಲುವುದಿಲ್ಲ. ಹಣವೇ ಇಲ್ಲದೆ ವಾರಗಟ್ಟಲೆ ಬದುಕ ಬಲ್ಲವರು ಹಳ್ಳಿಗರು ಎಂದು ಸ್ವಾನುಭವ ಸಹಿತ ಬಣ್ಣಿಸಿದರು.ಮೂಡಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಮಚಂದ್ರ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಮಾಜಿ ಸಚಿವ, ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರು ಬ್ಯಾಂಕಿನ ಬೆಳವಣಿಗೆಗಳಿಗೆ ಕಾರಣರಾದ ನಿರ್ದೇಶಕ ಮಂಡಳಿ, ಸದಸ್ಯರು, ಸಿಬಂದಿ ವಿಶೇಷವಾಗಿ ಸಿಇಒ ಅವರ ಸಹಕಾರವನ್ನು ಸ್ಮರಿಸಿಕೊಂಡರು. ಸಹಕಾರ ಇಲಾಖೆಯಿಂದ ಎರವಲು ಸೇವೆಯ ನೆಲೆಯಲ್ಲಿ ಬ್ಯಾಂಕಿನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರ ಅವರು ವಯೋನಿವೃತ್ತಿ ಹೊಂದುತ್ತಿರುವರಾದರೂ ಬ್ಯಾಂಕ್‌ ಇಲಾಖೆಯ ಸಹಕಾರದಿಂದ ಅವರ ಸೇವೆಯನ್ನು ಮುಂದುವರಿಸುವ ಪ್ರಯತ್ನ ನಡೆದಿದೆ ಎಂದು ಪ್ರಕಟಿಸಿದರು.

ಸಿಇಒ ಚಂದ್ರಶೇಖರ ಎಂ. ಸ್ವಾಗತಿಸಿ ಪ್ರಸ್ತಾವನೆಗೈದರು. ವಿನಯಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಎಂ. ಬಾಹುಬಲಿ ಪ್ರಸಾದ್‌ ವಂದಿಸಿದರು. ಗೋಪಿ ಬೆಂಗಳೂರು ಅವರ ಹಾಸ್ಯ ರಸಸಂಜೆ, ದೀಪಕ್‌ ರೈ ಮಂಗಳೂರು ಬಳಗದವರಿಂದ ‘ತೂಲೆ ತೆಲಿಪುಲೆ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಮ್ಮಾನ
ಚಿಂತನ ಸರಣಿಯ ಸಮ್ಮಾನ ಮಾಲಿಕೆಯಡಿ ಕ್ರೀಡಾರಂಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯ ಕಾಂಚನ್‌, ಕೃಷಿರಂಗದಲ್ಲಿ ಕೊರಗ ಶೆಟ್ಟಿ ಅಲಂಗಾರು, ಶ್ರೀನಿವಾಸ ಸಾಲ್ಯಾನ್‌, ಸ್ಟೀಫನ್‌ ಪಿಂಟೋ ಪರವಾಗಿ ಅವರ ತಾಯಿ, ಸಾಮಾಜಿಕ ರಂಗದಲ್ಲಿ ಕಳೆದ 4 ದಶಕಗಳಿಂದಲೂ ಮೂಡಬಿದಿರೆಯಲ್ಲಿ ಪತ್ರಿಕಾ ವಿತರಕರಾಗಿ ಸಕ್ರಿಯರಾಗಿರುವ ಪೇಪರ್‌ ರಾಜಾ (ರಾಜೇಂದ್ರ) ಇವರನ್ನು ಸಮ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕರನ್ನು ಪುರಸ್ಕರಿಸಲಾಯಿತು.

ಶ್ರದ್ಧಾಂಜಲಿ
1984- 86ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಸರಕಾರ ನೇಮಿಸಿದ್ದ ಜಿಲ್ಲಾ , ಉಪವಿಭಾಗ ಮತ್ತು ತಾಲೂಕು ಪುನರ್‌ರಚನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಮೂಡಬಿದಿರೆ ತಾಲೂಕು ರಚನೆಯ ಬಗ್ಗೆ ಧನಾತ್ಮಕವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದ, ಬಾಗಲಕೋಟೆಯ ಟಿ.ಎಂ. ಹುಂಡೇಕರ್‌ ಅವರು ನ. 20ರಂದು ನಿಧನ ಹೊಂದಿದ ಪ್ರಯುಕ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next