ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಸಾಧಿಸಿದ್ದು, ಕಾಂಗ್ರೆಸ್ ಪಕ್ಷ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಕಾಂಗ್ರೆಸ್ ಕಾರ್ಯಕರ್ತನಾಗಿ ಮುಂದುವರಿಯಲಿದ್ದು, ಮುಂದಿನ ಒಂದು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಗೌರವಿಸುವುದಾಗಿ ಹೇಳಿದ ಮಕೇನ್, ಈ ಸಂದರ್ಭದಲ್ಲಿ ಬಿಜೆಪಿಯನ್ನು ಅಭಿನಂದಿಸುವುದಾಗಿ ಹೇಳಿದರು. ಅಷ್ಟೇ ಅಲ್ಲ ಚುನಾವಣಾ ಆಯೋಗ ಇವಿಎಂ ಯಂತ್ರಗಳನ್ನು ಪರಿಶೀಲಿಸಬೇಕು ಎಂದು ಮಕೇನ್ ಮನವಿ ಮಾಡಿಕೊಂಡಿದ್ದಾರೆ.
ನನ್ನನ್ನು ಕಡೆಗಣಿಸಲಾಗಿತ್ತು: ಶೀಲಾ ದೀಕ್ಷಿತ್
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಎಡವಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದ ಕಾರಣ ಈ ಫಲಿತಾಂಶ ಬಂದಿದೆ. ಅಷ್ಟೇ ಅಲ್ಲ ಚುನಾವಣಾ ಪ್ರಚಾರದ ವೇಳೆ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಎಂಸಿಡಿ ಪ್ರಚಾರಕ್ಕೆ ಬರುವಂತೆ ನನ್ನ ಆಹ್ವಾನಿಸಿಲ್ಲ ಎಂದು ಶೀಲಾ ದೀಕ್ಷಿತ್ ಆರೋಪಿಸಿದ್ದಾರೆ.