ಮಂಗಳೂರು: ಎಂಸಿಸಿ ಬ್ಯಾಂಕ್‌ನ 112ನೇ ಸ್ಥಾಪಕರ ದಿನಾಚರಣೆ ಹಾಗೂ ಅತ್ಯಾಧುನಿಕ ಸುಸಜ್ಜಿತ ಆಡಳಿತ ಕಚೇರಿ ಉದ್ಘಾಟನೆ ಸಮಾರಂಭ ಶುಕ್ರವಾರ ನೆರವೇರಿತು.
ಕಚೇರಿ ಉದ್ಘಾಟಿಸಿದ ಮಿಲಾಗ್ರಿಸ್ ಅವರ್ ಲೇಡಿ ಆಫ್ ಮಿರಾಕಲ್ಸ್ ಚಚ್ ìನ ಧರ್ಮಗುರು ವಂ| ಬೊನವೆಂಚರ್ ನಜರೆತ್ ಅವರು ಮಾತನಾಡಿ, 112 ವರ್ಷದಿಂದ ಸ್ಥಾಪಕರು, ಆ ಬಳಿಕ ಬ್ಯಾಂಕ್‌ನ ಆಡಳಿತ ಮಂಡಳಿ, ಸಿಬಂದಿಯ ಶ್ರಮದಿಂದ ಎಂಸಿಸಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಔನ್ನತ್ಯ ಸಾಧಿಸುತ್ತಾ ಬಂದಿದೆ. ಸಮಾಜಕ್ಕೆ ಸದಾ ಕೊಡುಗೆ ನೀಡುತ್ತಿರುವ ಬ್ಯಾಂಕ್‌ನ ಸೇವೆ ಇನ್ನೂ ಮುಂದುವರಿಯಲಿ ಎಂದು ಹಾರೈಸಿದರು.
ನಗರದ ಹಿರಿಯ ವಕೀಲ, ಬ್ಯಾಂಕ್‌ನ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿರುವ ಕ್ಲಾರೆನ್ಸ್ ಪಾಯಸ್ ಅವರನ್ನು ಸಮ್ಮಾನಿಸಲಾಯಿತು. ಪಾಯಸ್ ಮಾತನಾಡಿ, ಬ್ಯಾಂಕ್‌ಗೆ ಗ್ರಾಹಕರೇ ಮುಖ್ಯ ಹೊರತು ಗ್ರಾಹಕರಿಗೆ ಬ್ಯಾಂಕ್ ಅಲ್ಲ, ಅವರೆಂದಿಗೂ ಬ್ಯಾಂಕ್ ಗೆ ಭಾರವಲ್ಲ ಎನ್ನುವ ಸೂತ್ರವನ್ನು ಪಾಲಿಸಬೇಕು ಎಂದರು.
ಹಿರಿಯ ಗ್ರಾಹಕರಿಗಾಗಿ ಹೊರ ತಂದಿರುವ ಎಂಸಿಸಿ ಡೈಮಂಡ್ ಕಸ್ಟಮರ್ ಕಾರ್ಡ್ ಅನ್ನು ಬಿಡುಗಡೆಗೊಳಿಸಿ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ವಂ| ರಾಬರ್ಟ್ ಡಿ’ಸೋಜಾ, ಉಡುಪಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ, ಹಿರಿಯ ವಕೀಲ ಎಂ.ಪಿ. ನರೋನ್ಹ ಶುಭಹಾರೈಸಿದರು. ಬ್ಯಾಂಕ್ ಉಪಾಧ್ಯಕ್ಷ ಜೆ.ಜೆ. ಡಿ’ಸಿಲ್ವ ಉಪಸ್ಥಿತರಿದ್ದರು.
ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೋ ಸ್ವಾಗತಿಸಿ, ಪ್ರಸ್ತಾವನೆಗೈದು, ಸಂಕಷ್ಟಕ್ಕೊಳಗಾದ ಸಮುದಾಯದ ನೆರವಿಗಾಗಿ 112 ವರ್ಷಗಳ ಹಿಂದೆ ಬ್ಯಾಂಕನ್ನು ಪಿ.ಎಫ್. ಎಕ್ಸ್ ಸಲ್ಡಾನ್ಹಾ ಸ್ಥಾಪಿಸಿದ್ದರು. ಬ್ಯಾಂಕ್ ಕ್ಷೇತ್ರ ಆಮೂಲಾಗ್ರ ಬದಲಾವಣೆಗೊಳಗಾಗಿದೆ, ಮಾಹಿತಿ ತಂತ್ರಜ್ಞಾನ ದಿಂದ ಕ್ರಾಂತಿಕಾರಿ ಪರಿವರ್ತನೆಗಳಾಗುತ್ತಿದ್ದು, ಅದಕ್ಕೆ ತೆರೆದುಕೊಳ್ಳದಿದ್ದರೆ ಬೆಳೆಯುವುದು, ಉಳಿಯುವುದು ಕಷ್ಟ ಎಂದರು.
ಮನು ಬಂಟ್ವಾಳ ನಿರೂಪಿಸಿದರು. ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು.
ರಾಜ್ಯಾದ್ಯಂತ ವಿಸ್ತರಣೆ
ಪ್ರಸ್ತುತ ಪಂಚ ಜಿಲ್ಲೆಗಳಿಗೆ ವಿಸ್ತರಣೆ ಯೋಜನೆ ಕಾರ್ಯಗತ ಗೊಳಿಸುತ್ತಿರುವ ಎಂಸಿಸಿ ಬ್ಯಾಂಕ್ ಮುಂದೆ ರಾಜ್ಯಾದ್ಯಂತ ವಿಸ್ತರಣೆ ಮಾಡುವ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಆರ್‌ಬಿಐಯಿಂದಲೂ ಅನುಮೋದನೆ ಸಿಕ್ಕಿರುತ್ತದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು.
ಸುಸಜ್ಜಿತ ಆಡಳಿತ ಕಚೇರಿಯಲ್ಲಿ ಸಿಬಂದಿ ತರಬೇತಿ ಕೇಂದ್ರ, ಎಟಿಎಂ, ಕ್ಯಾಶ್ ಡೆಪಾಸಿಟ್ ಯಂತ್ರ ವ್ಯವಸ್ಥೆಗೊಳಿಸಲಾಗಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.