Advertisement

ಎಂಬಿಬಿಎಸ್‌ 1ನೇ ವರ್ಷ ಫೇಲಾದ್ರೆ 6 ವಾರದಲ್ಲೇ ಪೂರಕ ಪರೀಕ್ಷೆ

04:00 AM Jul 08, 2017 | Team Udayavani |

ಬೆಂಗಳೂರು: ಎಂಬಿಬಿಎಸ್‌ ಪ್ರಥಮ ವರ್ಷದಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಪ್ರಕಟವಾದ ಆರು ವಾರಗಳಲ್ಲಿ ಪೂರಕ ಪರೀಕ್ಷೆಗೆ ಅವಕಾಶ ಕೊಟ್ಟು, ಅದೇ ಬ್ಯಾಚ್‌ನೊಂದಿಗೆ ಮುಂದಿನ ವರ್ಷಕ್ಕೆ ಪ್ರವೇಶ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಕೆ.ಎಸ್‌. ರವೀಂದ್ರನಾಥ್‌ ತಿಳಿಸಿದ್ದಾರೆ.

Advertisement

ಈ ತಿಂಗಳ 14ರಂದು ತಮ್ಮ ಅಧಿಕಾರವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿವಿಯಲ್ಲಿ ಜಾರಿಗೆ ತರಲಾದ ಸುಧಾರಣಾ ಕ್ರಮಗಳ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಬಿಬಿಎಸ್‌ ಪ್ರಥಮ ವರ್ಷದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಪ್ರಕಟವಾದ ಆರು ವಾರಗಳಲ್ಲಿ ಪೂರಕ ಪರೀಕ್ಷೆ ನಡೆಸಿ, ಕೋರ್ಸ್‌ ಮುಂದುವರಿಸುವ ವ್ಯವಸ್ಥೆಯನ್ನು 2017-18ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುತ್ತಿದೆ ಎಂದರು.

ಈ ಹಿಂದೆ ಎಂಬಿಬಿಎಸ್‌ ಪ್ರಥಮ ವರ್ಷದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯ ಫ‌ಲಿತಾಂಶ ಪ್ರಕಟವಾದ ಮೇಲೆ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿತ್ತು. ಇದಕ್ಕೆ ಕನಿಷ್ಟ 6 ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ತಮ್ಮ ರೆಗ್ಯುಲರ್‌ ಬ್ಯಾಚ್‌ನಿಂದ ಬೇರ್ಪಟ್ಟು, ಆಡ್‌ ಬ್ಯಾಚ್‌ನಲ್ಲಿ ಗುರುತಿಸಿಕೊಳ್ಳಬೇಕಾಗುತ್ತಿತ್ತು. ಇದು ವಿದ್ಯಾರ್ಥಿಗಳಲ್ಲಿ ಖನ್ನತೆ, ಮುಜುಗರಕ್ಕೆ ಕಾರಣವಾಗುತ್ತಿತ್ತು. ಪರಿಣಾಮವಾಗಿ ಶೈಕ್ಷಣಿಕ ಹಿನ್ನೆಡೆ ಅನುಭವಿಸುತ್ತಿದ್ದರು. ಪ್ರಥಮ ವರ್ಷದಲ್ಲಿ ಶೇ.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಉಳಿದ ವಿದ್ಯಾರ್ಥಿಗಳು ತೀರಾ ಕಡಿಮೆ ಅಂಕಗಳಿಂದ ಅನುತ್ತೀರ್ಣರಾಗಿರುತ್ತಾರೆ. ಅಂತಹವರನ್ನು ಅದೇ ಬ್ಯಾಚ್‌ನೊಂದಿಗೆ ಮುಂದುವರಿಯುವ ಅವಕಾಶ ನೀಡುವ ವ್ಯವಸ್ಥೆ ಜಾರಿಗೆ ತಂದರೆ ಉತ್ತಮ ಎಂದು ವಿವಿಧ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು ಸಲಹೆ ನೀಡಿದ್ದರಿಂದ, ಅದನ್ನು ಪರಿಗಣಿಸಿ ವಿವಿ ಈ ವ್ಯವಸ್ಥೆ ಜಾರಿಗೆ ತಂದಿದೆ ಎಂದು ರವೀಂದ್ರನಾಥ್‌ ವಿವರಿಸಿದರು.

ಖಾಯಂ ಸಂಯೋಜನೆ: ರಾಜ್ಯದ ವೈದ್ಯಕೀಯ ಕಾಲೇಜುಗಳು ವಿವಿಯೊಂದಿಗಿನ ಸಂಯೋಜನೆಯನ್ನು (ಅಫಿಲಿಯೇಷನ್‌) ಪ್ರತಿ ವರ್ಷ ನವೀಕರಿಸಿಕೊಳ್ಳಬೇಕಾಗಿತ್ತು. ಆದರೆ, ಈಗ ಖಾಯಂ ಸಂಯೋಜನೆ ಪದ್ದತಿ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಸಂಬಂಧಪಟ್ಟ ಕಾಲೇಜುಗಳು ಮೂರು ವರ್ಷದ ನವೀಕರಣ ಶುಲ್ಕ ಮುಂಗಡ ಪಾವತಿಸಬೇಕು. ಮೂರು ವರ್ಷದ ಬಳಿಕ ಪರಿಶೀಲನೆ ನಡೆಸಲಾಗುತ್ತದೆ. ಆದರೆ, ಖಾಯಂ ಸಂಯೋಜನೆಗೆ ಅರ್ಜಿ ಸಲ್ಲಿಸುವ ಕಾಲೇಜುಗಳ ಮೂಲಭೂತ ಸೌಕರ್ಯ, ಶೈಕ್ಷಣಿಕ ಪ್ರಗತಿ, ಆಡಳಿತಾತ್ಮಕ ವಿಷಯಗಳ ಬಗ್ಗೆ ಪರಿಶೀಲನಾ ಸಮಿತಿ ತಪಾಸಣೆ ನಡೆಸಲಿದೆ. ಈ ಸಂಬಂಧ ನಿಯಮಗಳನ್ನು ಅಂತಿಮಗೊಳಿಸಲಾಗಿದ್ದು, ಸದ್ಯ 650 ಕಾಲೇಜುಗಳು ವಿವಿಯೊಂದಿಗೆ ಸಂಯೋಜಿತವಾಗಿದೆ. ಇನ್ನೊಂದು ವಾರದಲ್ಲಿ ಖಾಯಂ ಸಂಯೋಜನೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಈಗಾಗಲೇ ಧಾರವಾಡದ ಎಸ್‌ಡಿಎಂ, ಆದಿಚುಂಚನಗಿರಿ ಫಾರ್ಮಸಿ ಕಾಲೇಜು, ಆಚಾರ್ಯ ಫಾರ್ಮಸಿ ಕಾಲೇಜು, ಜಯದೇವ ಹೃದ್ರೋಗ ಸಂಸ್ಥೆ, ಆರ್‌.ವಿ. ಡೆಂಟಲ್‌ ಕಾಲೇಜು ಖಾಯಂ ಸಂಯೋಜನೆಗೆ ಅರ್ಜಿ ಸಲ್ಲಿಸಿವೆ ಎಂದು ಕುಲಪತಿ ತಿಳಿಸಿದರು.

ಅವಶ್ಯಕತೆ ಅನುಗುಣವಾಗಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ. ಪ್ರಕೃತಿ ಚಿಕಿತ್ಸಾ ಮತ್ತು ಯೋಗಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಮೈಸೂರು. ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ ಸೇರಿ ಐದು ಕಡೆ “ಸ್ಕಿಲ್‌ ಲ್ಯಾಬ್‌’ ಸ್ಥಾಪಿಸಲಾಗುತ್ತಿದೆ. ನರ್ಸಿಂಗ್‌ ವಿಷಯದಲ್ಲಿ ಪಿಎಚ್‌ಡಿ ಕೋರ್ಸ್‌ ಪರಿಚಯಿಸಲಾಗುತ್ತಿದೆ. ಹುದ್ದೆಗಳ ಭರ್ತಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಲಾಗಿದೆ.

Advertisement

ವಿವಿಯಲ್ಲಿ ನಡೆದ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಬಿ ರಿಪೋರ್ಟ್‌ ಸಲ್ಲಿಸಿದ್ದು, ಅದನ್ನು ಸಿಂಡಿಕೇಟ್‌ ಸಭೆಯಲ್ಲಿ ಮಂಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ವೇತನವನ್ನು ಶೇ.18ರಷ್ಟು ಹೆಚ್ಚಳ ಮಾಡಿ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಪ್ರಸಕ್ತ ವರ್ಷ ಸಂಶೋಧನಾ ಚಟುವಟಿಕೆಗಳಿಗೆ 20 ಕೋಟಿ ರೂ. ನಿಗದಿಪಡಿಸಲಾಗಿದೆ. 688 ಬೋಧಕರಿಗೆ ಸಂಶೋಧನಾ ವಿಧಾನಗಳ ಬಗ್ಗೆ ತರಬೇತಿ ನೀಡಲಾಗಿದೆ. ಕಲಬುರಗಿ, ಬೆಳಗಾವಿ, ದಾವಣಗೆರೆಯಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರವೀಂದ್ರನಾಥ್‌ ಇದೇ ವೇಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next