Advertisement

ಎಂ.ಬಿ. ಪಾಟೀಲ್‌ ಹೇಳಿಕೆ ಖಂಡನೀಯ: ಸಾರಂಗ ಶ್ರೀ

03:25 PM Jul 28, 2017 | |

ಸಿಂದಗಿ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಲಿಂಗಾಯತ ಹಾಗೂ ವೀರಶೈವ ಬೇರ್ಪಡಿಸುವ ಕೆಲಸಕ್ಕೆ ಕೈಹಾಕಿರುವುದು ದುರ್ದೈವದ ಸಂಗತಿ ಎಂದು ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು ಖಂಡಿಸಿದ್ದಾರೆ.

Advertisement

ಪತ್ರಿಕಾ ಹೇಳಿಕೆ ನೀಡಿದ ಅವರು, ಬಸವಣ್ಣನವರು ವೀರಶೈವ ಅನ್ನುವ ಪದವನ್ನು ಒಪ್ಪಿ ತಮ್ಮ ವಚನಗಳಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಅದರಂತೆ 40 ವಚನಕಾರರು 143 ವಚನಗಳಲ್ಲಿ ವೀರಶೈವ ಪದ ಬಳಸಿದ್ದಾರೆ. ಅದರಂತೆ ಲಿಂಗಾಯತ ಎನ್ನುವ ಪದ 13 ವಚನಗಳಲ್ಲಿ ಬಳಸಿದ್ದಾರೆ.
ಲಿಂಗಾಯತ ಶಬ್ದದ ಅರ್ಥ, ಲಿಂಗವನ್ನು ಯಾರು ಶರೀರದ ಮೇಲೆ ಧರಿಸುತ್ತಾರೆ ಅವರು ಮಾತ್ರ ಲಿಂಗವಂತ ಎಂದು ಒಪ್ಪಿಕೊಳ್ಳಲು ಸಾಧ್ಯ. ಲಿಂಗ ಧರಿಸದೇ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ ಎಂದಿದ್ದಾರೆ. ಎಂ.ಬಿ. ಪಾಟೀಲರು ಯಾವುದೋ ಒತ್ತಡಕ್ಕೆ ಸಿಕ್ಕು ಈ ನಿರ್ಣಯಕ್ಕೆ ಬಂದಿದ್ದಾರೆ. ಯಾರೋ ಹೇಳುವ ಸಿದ್ಧಾಂತಕ್ಕೆ ಒಪ್ಪಿಗೆ ಸೂಚಿಸುವುದು ತಪ್ಪು. ಹಳಕಟ್ಟಿಯವರು ಸಂಪಾದಿಸಿದ ವಚನ ಗ್ರಂಥಗಳನ್ನು ಅಧ್ಯಯನ ಮಾಡಲಿ, ಅವರು ಅನುಸರಿಸುವ ಧರ್ಮಗುರುಗಳು, ವಿದ್ವಾಂಸರು ಬರೆದಿರುವ ಮತ್ತು ಮುದ್ರಿಸಿರುವ ಹಾಗೂ ಮಠಗಳಿಂದ
ಪ್ರಕಟವಾಗಿರುವ ಗ್ರಂಥಗಳನ್ನು ಅವಲೋಕಿಸಲಿ. ಆಗ ಸತ್ಯಾಂಶ ಮನವರಿಕೆಯಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ಶ್ರೀ ಸಿದ್ಧಗಂಗಾ ಮಠದ ಸ್ವಾಮಿಗಳು ವೀರಶೈವ ಲಿಂಗಾಯತ ಬೇರೆ ಎನ್ನುವುದನ್ನು ಎಲ್ಲಿಯೂ ಒಪ್ಪಿಕೊಂಡಿಲ್ಲ. ಅಖೀಲ ಭಾರತ ವೀರಶೈವ ಮಹಾಸಭಾ ಅನ್ನುವ ಸಂಸ್ಥೆ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಂತ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಎಲ್ಲರೂ ಲಿಂಗಧಾರಿಗಳೇ, ಎಲ್ಲರೂ ಲಿಂಗಪೂಜೆ ಮಾಡುವವರೆ ಇದ್ದಾಗ ಭೇದ ಯಾಕೆ?. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಎಂ.ಬಿ. ಪಾಟೀಲರನ್ನು ಧರ್ಮ
ಒಡೆಯುವ ಕೆಲಸಕ್ಕೆ ಉಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next