ವಿಜಯಪುರ: ಆಪರೇಷನ್ ಕಮಲ ಹೆಸರಿನಲ್ಲಿ ದೇಶದಲ್ಲಿ ಸ್ಥಾಪಿತವಾದ ಪ್ರಜಾಸತ್ತಾತ್ಮಕವಾಗಿ ಸ್ಥಾಪಿತವಾದ ಸರ್ಕಾರಗಳನ್ನು ಪತನ ಮಾಡುವುದನ್ನೇ ಬಿಜೆಪಿ ಮುಖ್ಯ ಗುರಿ, ಪ್ರವೃತ್ತಿ ಮಾಡಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಮಹಾರಾಷ್ಟ್ರ ರಾಜ್ಯದ ಶಿವಸೇನೆ ನೇತೃತ್ವದ ಮೈತ್ರಿ ಸರಕಾರ ಅಸ್ಥಿರಕ್ಕೆ ಮುಂದಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಶನಿವಾರ ಬಬಲೇಶ್ವರ ತಾಲೂಕ ಸಾರವಾಡ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಪರೇಶನ್ ಕಮಲ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ವಿರೋಧಿ ಸಂಸ್ಕೃತಿಗೆ ನಾಂದಿ ಹಾಡಿದೆ. ಅನ್ಯ ಪಕ್ಷಗಳ ಶಾಸಕರಿಗೆ ದುಡ್ಡು ಕೊಟ್ಟು ರಾಜೀನಾಮೆ ಕೊಡಿಸುವುದು, ಅನಗತ್ಯವಾಗಿ ಉಪ ಚುನಾವಣೆಯ ಹೊರೆ ಹೇರುವುದು, ಹಣದಿಂದ ಅಕ್ರಮ ಮಾರ್ಗದಲ್ಲಿ ಸಂವಿಧಾನ ಬಾಹಿರವಾಗಿ ಸರ್ಕಾರ ರಚಿಸುವುದು ಬಿಜೆಪಿ ಮುಖ್ಯ ಉದ್ಯೋಗ ಮಾಡಿಕೊಂಡಿದೆ ಎಂದು ಹರಿಹಾಯ್ದರು.
ಕರ್ನಾಟಕದಲ್ಲಿ ಈ ಸಂಸ್ಕೃತಿ ಅದಾಗಲೇ ಸಕ್ರೀಯವಾಗಿದೆ. ಅನ್ಯ ಪಕ್ಷಗಳ 17 ಶಾಸಕರನ್ನು ರಾಜೀನಾಮೆ ಕೊಡಿಸಿ, ಶೇ.40 ಪರ್ಸೆಂಟೇಸ್‍ನ ಅಕ್ರಮ ಸರ್ಕಾರವೇ ರಾಜ್ಯದಲ್ಲೀಗ ಅಸ್ತಿತ್ವದಲ್ಲಿದೆ. ಜನರೇ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಮಹಾರಾಷ್ಟ್ರ ರಾಜ್ಯದ ಸರದಿ. ಬಿಜೆಪಿ ನಾಯಕರು ಹಾಗೂ ಆ ಪಕ್ಷಕ್ಕೆ ನಿಜಕ್ಕೂ ಶಕ್ತಿ ಇದ್ದರೆ ಪ್ರಜಾಸತ್ತಾತ್ಮಕ ವಿರೋಧದ ಕೆಲಸ ಬಿಟ್ಟು ನೇರವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಜನಾದೇಶಕ್ಕೆ ಮುಂದಾಗಲಿ ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರು ತಾವು ಮಾಡಿದ್ದೆಲ್ಲ ನಡೆಯುತ್ತದೆ ಎಂದು ಕೊಂಡಿದ್ದು, ಜನರನ್ನು ಎಲ್ಲ ಸಮಯದಲ್ಲೂ ಮುರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಇಂಥ ಅಕ್ರಮ ಹಾಗೂ ಸಂವಿಧಾನ ವಿರೋಧಿಯಾದ ವರ್ತನೆ ಬಹಳ ದಿನ ನಡೆಯಯವುದಿಲ್ಲ. ಜನರೇ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ದಿಕ್ಕು ದೆಸೆ ಇಲ್ಲದ ಅಭಿವೃದ್ಧಿ ಶೂನ್ಯ ಸರ್ಕಾರ ನಡೆಯುತ್ತಿದ್ದು, ಮತದಾರರೇ ಇದಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ಎಚ್ಚರಿಸಿದರು.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ವಿಷಯದಲ್ಲಿ ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಪ್ರಜಾತಂತ್ರ ವಿರೋಧಿ ಅನೈತಿಕ ಸರ್ಕಾರ ರಚಿಸಬಹುದೆ. ಪ್ರಜಾತಂತ್ರದ ಕಗ್ಗೊಲೆ ಮಾಡಿ, ಹಿಂಬಾಗಲಿನಿಂದ ಅಧಿಕಾರಕ್ಕೆ ಬರುವ ಸಂಸ್ಕೃತಿ ಬಿಟ್ಟು ಜರಿಂದ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ:ಎಂ.ಆರ್.ಸೀತಾರಾಮ್ ಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ಒಳ್ಳೆಯದು ಮಾಡಲಿ: ಡಿಕೆ ಶಿವಕುಮಾರ್
ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಕೇಂದ್ರದ ಐಟಿ, ಈಡಿ, ಸಿಬಿಐ ಸೇರಿದಂತೆ ಸ್ವತಂತ್ರವಾಗಿದ್ದ ಎಲ್ಲ ತನಿಖಾ ಸಂಸ್ಥೆಗಳನ್ನು ಬಿಜೆಪಿ ತನ್ನ ಸ್ವಂತ ಹಾಗೂ ಅಧೀನ ಸಂಸ್ಥೆಗಳಾಗಿ ಪರಿವರ್ತಿಸಿಕೊಂಡಿದೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಚಕ್ರತೀರ್ಥ ಯಾರಿಗೂ ಬಿಟ್ಟಿಲ್ಲ. ಇತಿಹಾಸ ತಿರುಚುವುದೇ ಬಿಜೆಪಿ ಮೂಲ ಅಸ್ತ್ರವಾಗಿಸಿಕೊಂಡಿದೆ. ಈ ಮೊದಲು ಮುಸ್ಲಿಂ ರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಬಿಜೆಪಿ ಇದೀಗ ಬಸವೇಶ್ವರ, ನಾರಾಯಣಗುರು, ಮಹಾತ್ಮಾ ಗಾಂಧೀಜಿ, ಆದಿಚುಂಚನಗಿರಿಶ್ರೀ, ಸಿದ್ಧಗಂಗಾಶ್ರೀ, ಕುವೆಂಪು ಹೀಗೆ ಎಲ್ಲರನ್ನೂ ಗುರಿಯಾಗಿಸಿಕೊಂಡು ಚರಿತ್ರೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಜನತೆ ಇಂಥ ಎಲ್ಲ ಅನಾಚಾರಗಳಿಗೆ ಉತ್ತರ ಕೊಡುವ ಕಾಲ ದೂರವಿಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು.