ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿರುವುದಾಗಿ ಹೇಳುತ್ತಿರುವ ಇದೇ ಮಾಜಿ ಮುಖ್ಯಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ 2013 ರಲ್ಲಿ ದೆಹಲಿಯ ಹೋಟೆಲ್ ವೊಂದರಲ್ಲಿ ಒಬ್ಬರನ್ನು ಭೇಟಿಯಾಗಿದ್ದರು. ಅವರು ಯಾರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಹೇಳುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅಂದು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು. ಆ ಭೇಟಿಯ ಹಿನ್ನೆಲೆ ಏನು? ಭೇಟಿಯಾದ ವ್ಯಕ್ತಿ ಯಾರು ಎಂಬುದನ್ನು ಮೂರ್ನಾಲ್ಕು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: LPG : ಗ್ರಾಹಕರಿಗೆ ಸಿಹಿಸುದ್ದಿ- ವಾಣಿಜ್ಯ ಬಳಕೆ LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ
ಇದು ಗಾಳಿಯಲ್ಲಿ ಗುಂಡು ಅಲ್ಲ, ನಿಜವಾದ ಗುಂಡು ಎಂದ ಅವರು, ಇಂದು ಶೆಟ್ಟರ್ ಮತ್ತು ಸವದಿ ಅವರು ಬೆನ್ನಿಗೆ ಚೂರಿ ಹಾಕಿರುವುದಾಗಿ ಹೇಳುತ್ತಿರುವ ಯಡಿಯೂರಪ್ಪ ಅವರು ಅಂದು ನೇರವಾಗಿ ಎದೆಗೆ ಚೂರಿ ಹಾಕಿರಲಿಲ್ಲವೇ ಎಂದು ಕೇಳಿದರು.
ಲಿಂಗಾಯತರ ಮೂಲಕ ಲಿಂಗಾಯತರನ್ನು ಮುಗಿಸಲು ಈಗ ಬಿಜೆಪಿ ಮುಂದಾಗಿದೆ. ಯಾವಾಗಲೂ ಬಿಜೆಪಿ ಹೀಗೆ ಉಪಯೋಗಿಸಿಕೊಂಡು ನಂತರ ಕಸದಬುಟ್ಟಿಗೆ ಹಾಕುತ್ತದೆ. ಯಡಿಯೂರಪ್ಪ ಅವರ ವಿಚಾರದಲ್ಲೂ ಇದನ್ನೇ ಅನುಸರಿಸಿದೆ ಎಂದು ಆರೋಪಿಸಿದರು.