ಸ್ಯಾಂಡಲ್‌ವುಡ್‌ನ ಹೋಮ್ಲಿ ಲುಕ್‌ನ ನಾಯಕಿ ಮಯೂರಿ ಕಳೆದ ಎರಡು-ಮೂರು ವರ್ಷಗಳಿಂದ ಸಿನಿಮಾಗಳಿಗಿಂತ ಮದುವೆ, ಮಗು ಹೀಗೆ ವೈಯಕ್ತಿಕ ವಿಷಯಗಳಿಗೆ ಸುದ್ದಿಯಾಗಿದ್ದೇ ಹೆಚ್ಚು. “ಪೊಗರು’ ನಂತರ ಮಯೂರಿ ಬಿಗ್ ಸ್ಕ್ರೀನ್ ಮೇಲೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ.
ಇದೀಗ ಮಯೂರಿ ನಾಯಕಿಯಾಗಿ ಅಭಿನಯಿಸಿರುವ “ವೀಲ್‌ಚೇರ್ ರೋವಿಯೋ’ ಚಿತ್ರ ಇದೇ ಮೇ. 27 ರಂದು ತೆರೆ ಕಾಣುತ್ತಿದ್ದು, ದೊಡ್ಡ ಗ್ಯಾಪ್ ಬಳಿಕ ಮಯೂರಿ ಮತ್ತೂಂದು ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಅಂದಹಾಗೆ, “ವೀಲ್‌ಚೇರ್ ರೋಮಿಯೋ’ ಚಿತ್ರದಲ್ಲಿ ನಾಯಕ ರಾಮ್ ಚೇತನ್, ವಿಕಲ ಚೇತನನಾಗಿ ಕಾಣಿಸಿಕೊಂಡರೆ, ನಾಯಕಿ ಮಯೂರಿ ಅಂಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪಾತ್ರವನ್ನು ಕೇಳಿದ ಅನೇಕ ನಾಯಕಿಯರು ಈ ಪಾತ್ರವನ್ನು ನಿರ್ವಹಿಸಲು ಹಿಂದೇಟು ಹಾಕಿದ್ದರಂತೆ. ಅದಕ್ಕೆ ಕಾರಣ ನಾಯಕಿಯ ಪಾತ್ರವಂತೆ!
ಹೌದು, ಸಿನಿಮಾದಲ್ಲಿ ಕಣ್ಣು ಕಾಣಿಸದ (ಅಂಧ) ನಾಯಕಿ ವೇಶ್ಯೆಯಾಗಿಯೂ ಇರುತ್ತಾಳೆ. ಅನೇಕ ನಾಯಕಿಯರಿಗೆ ಈ ಸಿನಿಮಾದಲ್ಲಿ ತಮ್ಮ ಪರಿಚಯ ಮಾಡುತ್ತಿರುವಾಗಲೇ, ಉಳಿದ ವಿವರಗಳನ್ನು ಕೇಳದೆ ಈ ಪಾತ್ರದಿಂದ ಹಿಂದೆ ಸರಿದಿದ್ದರು. ಅಂತಿಮವಾಗಿ ಈ ಪಾತ್ರವನ್ನು ಮಯೂರಿ ಅವರಿಗೂ ಹೇಳಲಾಯಿತು. ಆರಂಭದಲ್ಲಿ ಮಯೂರಿ ಕೂಡ ಇಂಥದ್ದೊಂದು ಪಾತ್ರ ಮಾಡಲು ಹಿಂದೇಟು ಹಾಕಿದ್ದರು. ಆದರೆ ಕೊಂಚವೂ ಎಕ್ಸ್‌ಪೋಸ್ ಇಲ್ಲದ ಪಾತ್ರ, ಮನಮುಟ್ಟುವ ಸಂಭಾಷಣೆ, ಹೃದಯಸ್ಪರ್ಶಿ ಸನ್ನಿವೇಶಗಳು, ಪಾತ್ರವನ್ನು ತೆರೆಮೇಲೆ ತೋರಿಸುವ ರೀತಿ ಮಯೂರಿ ಅವರಿಗೆ ಇಷ್ಟವಾಯಿತು. ಕೊನೆಗೆ ಈ ಪಾತ್ರವನ್ನು ಮಯೂರಿ ಮಾಡಲು ಒಪ್ಪಿಕೊಂಡರು’ ಎನ್ನುವುದು ಚಿತ್ರತಂಡ ಮಾತು.
“ತೆರೆಮೇಲೆ ಮಯೂರಿ ಅವರ ಪಾತ್ರವನ್ನು ನೋಡಿದ ಪ್ರತಿಯೊಬ್ಬರಿಗೂ ಅವರು ಇಷ್ಟವಾಗುತ್ತಾರೆ. ಅಷ್ಟು ಸಹಜವಾಗಿ, ಮನಮುಟ್ಟುವಂತೆ ಮಯೂರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಂತಿಮವಾಗಿ ಇಂಥದ್ದೊಂದು ಪಾತ್ರ ರಿಜೆಕ್ಟ್ ಮಾಡಿದವರಿಗೇ ಹೊಟ್ಟೆ ಉರಿ ತರಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಪಾತ್ರ ತೆರೆಮೇಲೆ ಮೂಡಿ ಬಂದಿದೆ’ ಎಂದು ಮಯೂರಿ ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತದೆ “ವೀಲ್ ಚೇರ್ ರೋಮಿಯೋ’ ಚಿತ್ರತಂಡ.
ಇನ್ನು “ಅಗಸ್ತ್ಯ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ಟಿ. ವೆಂಕಟಾಚಲಯ್ಯ ನಿರ್ಮಿಸಿರುವ “ವೀಲ್‌ಚೇರ್ ರೋಮಿಯೋ’ ಚಿತ್ರಕ್ಕೆ ಜಿ. ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಮ್ ಚೇತನ್, ಮಯೂರಿ ಅವರೊಂದಿಗೆ ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲನಾಣಿ, ಗಿರೀಶ್ ಶಿವಣ್ಣ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಬಿಡುಗಡೆ ಯಾಗಿರುವ “ವೀಲ್‌ಚೇರ್ ರೋಮಿಯೋ’ ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಥಿಯೇಟರ್‌ನಲ್ಲಿ ಸಿನಿಮಾ ಎಷ್ಟರ ಮಟ್ಟಿಗೆ ಸಿನಿಪ್ರಿಯರಿಗೆ ಇಷ್ಟವಾಗಲಿದೆ ಅನ್ನೋದು ಮುಂದಿನವಾರದ ಹೊತ್ತಿಗೆ ಗೊತ್ತಾಗಲಿದೆ.
–ಜಿ. ಎಸ್. ಕಾರ್ತಿಕ ಸುಧನ್