ಮುಂಬಯಿ: ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಇದರ 12ನೇ ವಾರ್ಷಿಕ ಸಮಾವೇಶವು ಶನಿವಾರ ಸಂಜೆ ಘಾಟ್ಕೋಪರ್ ಪೂರ್ವ ಪಂತ್‌ನಗರದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿ ಇದರ ಸಭಾಗೃಹದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಅಭ್ಯಾಗತರಾಗಿದ್ದ ಸಮಾಜ ಸೇವಕ, ಹಿರಿಯ ಉದ್ಯಮಿ, ಸಾಮಾಜಿಕ ಚಿಂತಕ ಪೊಲ್ಯ ಉಮೇಶ್ ಶೆಟ್ಟಿ ಮತ್ತು ಗಾಯತ್ರಿ ಪರಿವಾರದ ಮುಂದಾಳು ಜಯಲಕ್ಷ್ಮೀ ಶೆಟ್ಟಿ ಅವರು ಆಗಮಿಸಿ ದೀಪ ಪ್ರಜ್ವಲಿಸಿ ಸಮಾವೇಶಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ನಗರದ ಹಿರಿಯ ಸಮಾಜ ಸೇವಕ, ಸಂಘಟಕ ಧರ್ಮಪಾಲ ಯು. ದೇವಾಡಿಗ ಇವರಿಗೆ ಪ್ರತಿಷ್ಠಾನದ 2021ನೇ ಸಾಲಿನ ವಾರ್ಷಿಕ “ಚಕ್ರಧಾರಿ’ ಪ್ರಶಸ್ತಿಯನ್ನು ಹಾಗೂ ಮುಂಬಯಿ ಮೆಟ್ರೋ ಸಂಸ್ಥೆಯ ವಿಶೇಷಾಧಿಕಾರಿ ಕೆ. ಎಲ್. ಶಾಂತಾರಾಮ ಹಂಸಗಾರ ಚೆಂಬೂರು ಇವರಿಗೆ ವಾರ್ಷಿಕ “ಕೃಷಿ ಬಂಧು’ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು. ಮಯೂರ ವರ್ಮ ಪ್ರತಿಷ್ಠಾನದ 10ನೇ ಪ್ರಕಾಶಿತ “ಸನಾತನ ಧರ್ಮವೂ ಪ್ರಕೃತಿಯ ಆರಾಧನೆಯೂ’ ಕೃತಿಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ದೇಶಭಕ್ತಿಗೀತೆಯೊಂದಿಗೆ ಆದಿಗೊಂಡ ಕಾರ್ಯಕ್ರಮದಲ್ಲಿ ನಿತ್ಯಾನಂದ ಡಿ. ಕೋಟ್ಯಾನ್, ಅಶೋಕ್ ಪಕ್ಕಳ, ನಳಿನಿ ಪ್ರಸಾದ್, ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ, ಕೋಶಾಧಿಕಾರಿ ಪದ್ಮನಾಭ ಸಫಲಿಗ, ಜತೆ ಕಾರ್ಯದರ್ಶಿ ಉಷಾ ಕೊಡ್ಲೆಕೆರೆ, ಮಾಜಿ ಅಧ್ಯಕ್ಷ ವಿ. ಆರ್. ಭಟ್, ಡಾ| ಸತೀಶ್ ಬಂಗೇರ, ನಿತ್ಯ ಮುಂಡ್ಕೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
–ಚಿತ್ರ – ವರದಿ: ರೋನ್ಸ್ ಬಂಟ್ವಾಳ್