ಮುಂಬಯಿ: ಮಯೂರ ಸ್ಕೂಲ್ ಆಫ್ ಆರ್ಟ್ಸ್ ಮತ್ತು ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇವರ ವತಿಯಿಂದ ಜರಗಿದ “ಬಣ್ಣದ ರಂಗು…ಸಂಸ್ಕಾರದ ಮೆರುಗು’ ವಿಶೇಷ ಬೇಸಿಗೆ ಶಿಬಿರಕ್ಕೆ ರವಿವಾರ ತೆರೆಬಿದ್ದಿದೆ. ಕಿನಾರ ಕಡಲ ತೀರ, ಕುಂದಾಪುರ ಇಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ “ನೀರು ಉಳಿಸಿ, ಕಾಡು ಬೆಳೆಸಿ’ ಎಂಬ ಸಂದೇಶ ಸಾರುವ ಮರಳು ಶಿಲ್ಪ ರಚನೆಯೊಂದಿಗೆ ವಿಶೇಷವಾಗಿ ಶಿಬಿರವನ್ನು ಸಂಪನ್ನಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಬಂಧಕ ಮತ್ತು ಲೇಖಕ, ಕವಿ ಗೋಪಾಲ್ ತ್ರಾಸಿ, ಅತಿಥಿ ಅಭ್ಯಾಗತರಾಗಿ ಶಿಕ್ಷಕಿ ಮತ್ತು ಲೇಖಕಿ ನಾಗರತ್ನ ಜಿ.ಹೆಳೆì, ವಿವೇಕ ಶಿಕ್ಷಣ ವಾಹಿನಿ ಮಂಡ್ಯ ಇದರ ಸದಸ್ಯರು ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ವೈಷ್ಣವಿ ಪೆರ್ಡೂರು, ಕ್ಲೀನ್ ಕುಂದಾಪುರ ಯೋಜನೆಯ ಡಾ| ಕೆ.ರಶ್ಮೀ ಹಾಗೂ ಮಯೂರ ಸ್ಕೂಲ್ ಆಫ್ ಆರ್ಟ್ಸ್ನ ಸಂಸ್ಥಾಪಕ, ಶಿಬಿರದ ಆಯೋ ಜಕ ವಕ್ವಾಡಿ ಮಹೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಗೋಪಾಲ್ ತ್ರಾಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲೆ ಮೊದಲ ಬಾರಿ ನಡೆಯುತ್ತಿರುವ ಈ ಶಿಬಿರದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಕೇವಲ ವಿದ್ಯಾಜ್ಞಾನ ಒಂದಿದ್ದರೆ ಸಾಲದು, ಅದರೊಂದಿಗೆ ಭಾರತೀಯ ಸಂಸ್ಕಾರ ಗುಣಗಳು ಕೂಡ ಜೀವನದ ಅತೀ ಮುಖ್ಯ ಅಂಗ. ಇನ್ನಷ್ಟು ಇಂತಹ ಅನೇಕ ಕಾರ್ಯಕ್ರಮಗಳನ್ನು ಈ ಸಂಸ್ಥೆ ನಡೆಸುವಂತಾಗಲೆಂದು ಹಾರೈಸಿದರು.
ನಾಗರತ್ನ ಹೆಳೆì ಮಾತನಾಡಿ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಾದರೂ ಮಹೇಂದ್ರ ಆಚಾರ್ಯ ಯವರಿಗೊಂದು ಉತ್ತಮ ಆರಂಭದ ಅಗತ್ಯ ವಿದೆ, ಅನೇಕ ಸವಾಲುಗಳಿದ್ದರೂ ಅವುಗಳನ್ನು ಮೆಟ್ಟಿ ನಿಂತು ಒಂದು ಉತ್ತಮ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯ ವಾದಗಳು. ಪೋಷಕರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಹೆಚ್ಚೆಚ್ಚು ಕಳುಹಿಸಬೇಕು ಎಂದು ಮನವಿ ಮಾಡಿದರು.
ಡಾ| ರಶ್ಮೀ ಮಾತನಾಡಿ ಕಡಲು ಮಾಲಿನ್ಯದಿಂದ ಉಂಟಾಗುತ್ತಿರುವ ಹಾನಿ, ಅದನ್ನು ತಡೆಗಟ್ಟಲು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳ ಕುರಿತು ನೆರೆದವರಿಗೆ ತಿಳಿಸಿದರು. ಶಿಬಿರಾರ್ಥಿಯ ಪೋಷಕರಾದ ನಿಮಿತಾ ಅವರು ಶಿಬಿರ ಕುರಿತು ತಮ್ಮ ಅಭಿಪ್ರಾಯ ಮತ್ತು ಮಕ್ಕಳಿಗೆ ಶಿಬಿರದಿಂದ ದೊರೆತ ಉತ್ತಮ ವಿಚಾರಗಳನ್ನು ನೆರೆದವರಲ್ಲಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಗೋಪಾಲ್ ತ್ರಾಸಿ ಮತ್ತು ನಾಗರತ್ನ ಹೆಳೆì ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ವೈಷ್ಣವಿ ಪೆರ್ಡೂರು ಹಾಡು ಹಾಡಿ ರಂಜಿಸಿದರು. ಎಸ್.ನಿರೀûಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದು, ವಕ್ವಾಡಿ ಮಹೇಂದ್ರ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಶಿವಪ್ರಸಾದ್ ವಕ್ವಾಡಿ ನಿರೂ ಪಿಸಿದರು. ವಿಶ್ರುತಾ ಹೇಳೆì ವಂದಿಸಿದರು.
ಚಿತ್ರ, ವರದಿ: ರೋನ್ಸ್ ಬಂಟ್ವಾಳ್