ಬೆಂಗಳೂರು: ಶಾಂತಿನಗರ ಹಿಂದೂ ರುದ್ರಭೂಮಿ ಸಮೀಪದಲ್ಲಿರುವ ಬ್ಲಾಕ್‌ಸ್ಪಾಟ್ ಕಂಡು ಆಕ್ರೋಶ ವ್ಯಕ್ತಪಡಿಸಿದ ಮೇಯರ್ ಗಂಗಾಂಬಿಕೆ, ರುದ್ರಭೂಮಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ 50 ಸಾವಿರ ರೂ. ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಸ್ವತ್ಛತಾ ಆಂದೋಲನದಡಿಯಲ್ಲಿ ಶನಿವಾರ ನಗರದ ಹಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಸ್ವತ್ಛತೆ ಕಾಪಾಡಲು ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗರಂ ಆದರು. ಜತೆಗೆ ನಿರ್ವಹಣೆ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಂಡು ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿನಗರದ 4 ರುದ್ರಭೂಮಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕ್ರೈಸ್ತರ 2 ಹಾಗೂ ಅಲ್ಪಸಂಖ್ಯಾರ ಒಂದು ರುದ್ರಭೂಮಿ ಸ್ವತ್ಛತೆಯಿದೆ ಕೂಡಿದೆ. ಆದರೆ, ಹಿಂದೂ ರುದ್ರಭೂಮಿ ಮಾತ್ರ ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ರಾಜ್ಯ ಸರ್ಕಾರದ ಅನುದಾನದಲ್ಲಿಯಡಿ ರುದ್ರಭೂಮಿ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಹಿಂದೂ ರುದ್ರಭೂಮಿಯ ಸಮೀಪ ಕಸ ಸುರಿಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಎಲ್ಲ ವಾರ್ಡ್‌ಗಳಲ್ಲಿಯೂ ಮಾರ್ಷಲ್ ನೇಮಿಸಲಾಗುತ್ತಿದ್ದು, ನಗರದ ಸ್ವತ್ಛತೆ ಹಾಗೂ ಸೌಂದರ್ಯಕ್ಕೆ ಧಕ್ಕೆ ತರುವವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸವೇಶ್ವರ ಪುತ್ಥಳಿ ನಿರ್ಮಾಣ: ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲ್ಸೇತುವೆ ಬಳಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಜಾಗ ನೀಡುವಂತೆ ವೀರಶೈವ ಸಮುದಾಯದವರು ಕೇಳಿದ್ದು, ಅದರಂತೆ ಪಾಲಿಕೆಯಿಂದ ಜಾಗ ನೀಡಿದ್ದೇವೆ. ಅದರಂತೆ ಪುತ್ಥಳಿಗೆ ತಗಲುವ ವೆಚ್ಚವನ್ನು ಅವರೇ ವ್ಯಯಿಸಲಿದ್ದು, ಈ ಕುರಿತು ಆಯುಕ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಮಾಜಿ ಮೇಯರ್ ಪದ್ಮಾವತಿ, ರಾಜಾಜಿನಗರ ಪಾಲಿಕೆ ಸದಸ್ಯ ಜಿ.ಕೃಷ್ಣಮೂರ್ತಿ ಇತರರಿದ್ದರು.