ಬೆಂಗಳೂರು: ಬಿಬಿಎಂಪಿ ಮೇಯರ್ ಜಿ. ಪದ್ಮಾವತಿಯವರು ಅಧಿಕಾರಿಗಳೊಂದಿಗೆ ಮಂಗಳವಾರ ಬೆಳಗ್ಗೆ ಪುರಭವನ ಸಮೀಪದ ಸಿಟಿ ಶೆಡ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಅಧಿಕಾರಿಗಳ ಲೋಪದೋಷ ಕಂಡು ಮೇಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಲಿಕೆಯ ಸಿಟಿಶೇಡ್‌ನಲ್ಲಿ 120ಕ್ಕೂ ಹೆಚ್ಚು ಹಳೆಯ ವಾಹನಗಳನ್ನು ನಿಲ್ಲಿಸಲಾಗಿತ್ತು. ಕೂಡಲೆ ವಾಹನಗಳನ್ನು ತೆರೆವುಗೊಳಿಸಿ ಖಾಲಿ ಪ್ರದೇಶವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ, ನಾಗರಿಕರ ತೆರಿಗೆ ಹಣ ಖರ್ಚು ಮಾಡಿ ಖರೀದಿಸಲಾಗಿದ್ದ ಕಾಂಪ್ಯಾಕ್ಟರ್‌ಗಳನ್ನು ಅಧಿಕಾರಿಗಳು ಬಳಕೆ ಮಾಡದೆ ಇರುವುದಕ್ಕೆ ಮೇಯರ್ ಕೆಂಡಮಂಡಲವಾದರು. ಪಾಲಿಕೆಯ 3ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳನ್ನು ಕೆಲ ಅಧಿಕಾರಿಗಳು ಗುತ್ತಿಗೆಗೆ ನೀಡಿರುವ ಬಗ್ಗೆ ಆರೋಪ ಕೇಳಿಬಂದಾಗ ಮೇಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆಟ್ಟು ನಿಂತಿರುವ ಹಾಗೂ ಬಳಸದೇ ನಿಂತಿರುವ ವಾಹನಗಳನ್ನು ಕಂಡು, “ವಾಹನಗಳ ಕೊರತೆ ಇದೆ ಎಂದು ಅಧಿಕಾರಿಗಳು ಪದೇ ಪದೇ ಸಬೂಬು ಹೇಳುತ್ತಿರುತ್ತಾರೆ. ಆದರೆ ವಾಹನಗಳ ಸರಿಯಾದ ನಿರ್ವಹಣೆ ಇಲ್ಲದೆ ಇಂತಹ ಸ್ಥಿತಿಗೆ ಬಂದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.
ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಹಾಗೂ ಸಾರಿಗೆ ವಿಭಾಗಕ್ಕೆ ಒಬ್ಬ ದಕ್ಷ ಅಧಿಕಾರಿಯನ್ನು ನೇಮಿಸುವಂತೆ,’ ಆದೇಶಿಸಿದರು. ಹಾಗೆಯೇ ಶವ ಸಾಗಿಸುವ 8 ವಾಹನಗಳನ್ನು ಮೂಲೆಗುಂಪು ಮಾಡಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.