ಬೆಂಗಳೂರು: ಇತ್ತೀಚೆಗೆ ನಿಧನರಾದ ಬಿಬಿಎಂಪಿ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಶರಣಪ್ಪ ಎಸ್.ಖಂಡ್ರೆ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಸಭೆ ಕರೆಯಲಾಗುವುದು ಎಂದು ಮೇಯರ್ ಆರ್.ಸಂಪತ್‌ರಾಜ್ ತಿಳಿಸಿದ್ದಾರೆ.
ಸೋಮವಾರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಖಂಡ್ರೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮೇಯರ್, ಸ್ನೇಹಜೀವಿಯಾಗಿದ್ದ ಖಂಡ್ರೆಯವರು ಪಾಲಿಕೆಯ ನೌಕರರಿಗೆ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ಗೌರವ ತಂದಿದ್ದಾರೆ. ಇಂದು ಅವರು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆಯ ಪ್ರತಿಯೊಂದು ವಿಭಾಗದ ಕಾರ್ಯವೈಖರಿಯ ಬಗ್ಗೆ ಸಮಗ್ರವಾಗಿ ತಿಳಿಸಿದ್ದ ಖಂಡ್ರೆಯವರು ಎಷ್ಟೇ ಒತ್ತಡವಿದ್ದರೂ, ಬೇಸರಗೊಳ್ಳುತ್ತಿರಲಿಲ್ಲ. ನಾನು ಮೇಯರ್ ಆಗುವ ಮೊದಲು ಪಾಲಿಕೆಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆಯಲು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆದಿದ್ದು, ಅವರ ನಿಧನದ ವಿಷಯ ತಿಳಿದಾಗ ತೀವ್ರ ಆಘಾತವಾಗಿತ್ತು ಎಂದರು.
ಇದೇ ವೇಳೆ ಕೆಲ ಸದಸ್ಯರು ಶಿವಶರಣಪ್ಪ ಎಸ್. ಖಂಡ್ರೆಯವರ ಹೆಸರಿನಲ್ಲಿ ಪಾಲಿಕೆಯಲ್ಲಿನ ಪ್ರತಿಭಾನ್ವಿತ ಹಾಗೂ ಶ್ರಮವಹಿಸಿ ಕೆಲಸ ಮಾಡುವಂತಹ ನೌಕರರಿಗೆ ಪ್ರಶಸ್ತಿ ನೀಡಬೇಕು ಎಂದು ಕೆಲ ಸದಸ್ಯರು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಅವರು ಈ ಕುರಿತು ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.
ಆಡಳಿತ ಪಕ್ಷ ನಾಯಕ ಮಹಮದ್ ನವಾಬ್ ರಿಜ್ವಾನ್ ಮಾತನಾಡಿದರು. ಈ ವೇಳೆ ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಸೇರಿದಂತೆ ಪ್ರಮುಖರು ಹಾಜರಿದ್ದರು.