Advertisement
ಹಲ್ಲೆಗೈದಿಲ್ಲ: ಮೇಯರ್ಆದರೆ, ಮೇಯರ್ ಕವಿತಾ ಸನಿಲ್ ಅವರು ತಮ್ಮ ಮೇಲಿನ ಆರೋಪ ವನ್ನು ಅಲ್ಲಗಳೆದಿದ್ದು, ತಾವು ವಾಚ್‌ಮನ್ ಪತ್ನಿ ಅಥವಾ ಆಕೆ ಮಗುವಿನ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಪೂರಕವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಮಾಧ್ಯಮದ ಮುಂದೆ ಶುಕ್ರವಾರ ಸಂಜೆ ಪ್ರದರ್ಶಿಸಿದ ಅವರು, ತಮ್ಮ ವಿರುದ್ಧ ರಾಜಕೀಯ ದುರುದ್ದೇಶದಿಂದ ಈ ರೀತಿ ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ, ಪ್ರಕರಣವು ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಮಗು ಹಾಗೂ ಮಹಿಳೆಯ ಮೇಲೆ ಅಮಾನವೀಯವಾಗಿ ವರ್ತಿಸಿರುವ ಮೇಯರ್ ಕವಿತಾ ಸನಿಲ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಆದರೆ ಈ ಘಟನೆ ಬಗ್ಗೆ ಸದ್ಯಕ್ಕೆ ದೂರು ಸ್ವೀಕರಿಸಿಕೊಂಡಿರುವ ಪಾಂಡೇಶ್ವರದ ಮಹಿಳಾ ಠಾಣೆ ಪೊಲೀಸರು, ಕೇಸ್ ದಾಖಲಿಸಿಕೊಂಡಿಲ್ಲ. ಮೇಯರ್ ವಿರುದ್ಧದ ದೂರಿಗೆ ಎಫ್‌ಐಆರ್ ದಾಖಲಿಸಬೇಕಾದರೆ ಕೋರ್ಟ್ ಅನುಮತಿ ಪಡೆಯಬೇಕಾಗಿದೆ. ಆ ಬಳಿಕವಷ್ಟೇ ಪ್ರಕರಣದ ತನಿಖೆ ಬಗ್ಗೆ ತೀರ್ಮಾನವಾಗಬೇಕಿದೆ.
ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡುತ್ತಿ ರುವ ಬಾಗಲಕೋಟೆ ಮೂಲದ ಪುಂಡಲೀಕ ಅವರ ಪತ್ನಿ ಕಮಲಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ “ಮೇಯರ್ ತನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಹಲ್ಲೆಯಿಂದಾಗಿ ತನ್ನ ಬಾಯಿ ಮತ್ತು ಕಿವಿಗೆ ಗಾಯವಾಗಿದೆ. ತನ್ನ ಮಗುವಿನ ಮೇಲೂ ಹಲ್ಲೆ ಮಾಡಿದ್ದು, ಕೈಯಿಂದ ಎತ್ತಿ ಎಸೆದಿದ್ದಾರೆ’ ಎಂದು ಆರೋಪಿಸಿದ್ದಾರೆ. ಪ್ರಕರಣದ ಹಿನ್ನೆಲೆ
ದೀಪಾವಳಿ ಹಬ್ಬದಂದು ಮೇಯರ್ ಮನೆಯಲ್ಲಿ ಆಕೆಯ ಮಕ್ಕಳು ಪಟಾಕಿ ಹಚ್ಚುತ್ತಿದ್ದರು. ಅದನ್ನು ನೋಡಲು ವಾಚ್‌ಮೆನ್ ಮಕ್ಕಳು ಕೂಡ ಅಲ್ಲಿಗೆ ಹೋಗಿದ್ದರು. ಆಗ ಮೇಯರ್ ಪುತ್ರಿ ವಾಚ್‌ಮೆನ್‌ನ ಪುತ್ರನ ಮೇಲೆ ಹಲ್ಲೆ ನಡೆಸಿದ್ದಳು. ಈ ಸಂದರ್ಭದಲ್ಲಿ ವಾಚ್‌ಮೆನ್ ಪುಂಡಲೀಕ ಅವರು ದೀಪಾವಳಿಯ ದೀಪ ಹಚ್ಚಲು ಮೇಣದ ಬತ್ತಿ ತರಲು ಅಂಗಡಿಗೆ ಹೋಗಿದ್ದರು. ಪತ್ನಿ ಕಮಲಾ ಮತ್ತು ಪುತ್ರ ಹಾಗೂ ಪುತ್ರಿ ಮಾತ್ರ ಅಲ್ಲಿದ್ದರು ಎಂದು ಕಮಲಾ ನೀಡಿದ ದೂರಿನಲ್ಲಿ ಉಲ್ಲೇಖೀಸಲಾಗಿದೆ.
Related Articles
Advertisement
ವಾಸ್ತವ ಸಂಗತಿ ತನಿಖೆ ಬಳಿಕ ಆದರೆ, ವಾಸ್ತವದಲ್ಲಿ ಅಲ್ಲಿ ಏನು ನಡೆದಿತ್ತು ಹಾಗೂ ಮೇಯರ್ ಅವರು ವಾಚ್‌ಮನ್ ಹಾಗೂ ಆಕೆ ಪುತ್ರಿ ಮೇಲೆ ಹಲ್ಲೆ ನಡೆಸಿರುವುದು ನಿಜವೇ ಅಥವಾ ರಾಜಕೀಯ ಪ್ರೇರಿತವೇ ಎಂಬುದು ಪೊಲೀಸರ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ರಾಜಕೀಯ ತಿರುವು
ದೀಪಾವಳಿಯ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಕ್ಕಳಿಬ್ಬರಲ್ಲಿ ಉಂಟಾದ ಜಗಳ ಈಗ ರಾಜಕೀಯ ಬಣ್ಣ ಪಡೆದಿದ್ದು, ಮೇಯರ್ ಕವಿತಾ ಸನಿಲ್ ಅವರ ರಾಜೀನಾಮೆಗೆ ವಿಪಕ್ಷ ಗಳಿಂದ ಒತ್ತಾಯ ಕೇಳಿ ಬಂದಿದೆ. ಮೇಯರ್ ಪುತ್ರಿ ಹಾಗೂ ವಾಚ್‌ಮನ್‌ನ ಮಗನಿಗೆ ಉಂಟಾದ ಜಗಳದ ಕುರಿತಂತೆ ವಾಚ್‌ಮನ್‌ನ ಹೆಂಡತಿ ಕಮಲಾ ಅವರ ವೀಡಿಯೋ ತುಣುಕು ಕೂಡ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ಬಿಜೆಪಿಯ ಕೆಲವು ಮುಖಂಡರು ಮೇಯರ್ ವಾಸವಿರುವ ಅಪಾರ್ಟ್‌ಮೆಂಟ್‌ಗೂ ತೆರಳಿ, ವಾಚ್‌ಮನ್ ಹಾಗೂ ಆಕೆ ಪತ್ನಿಯನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸಂತ್ರಸ್ತರ ಬೆಂಬಲಕ್ಕೂ ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇಯರ್ ರಾಜೀನಾಮೆ ನೀಡಲಿ: ಬಿಜೆಪಿ
ಖಂಡಿಸಿರುವ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ “ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೇಯರ್ ಒಬ್ಬರು ಈ ರೀತಿಯ ವರ್ತನೆ ತೋರಿಸಿದ್ದು, ಈ ಘಟನೆಯು ಇಡೀ ಮಂಗಳೂರಿಗೆ ಕಳಂಕ ತರುವ ವಿಚಾರವಾಗಿದೆ. ಹೀಗಾಗಿ, ಮೇಯರ್ ತಮ್ಮ ಹುದ್ದೆಯ ಮೇಲೆ ಗೌರವವಿದ್ದರೆ, ತತ್‌ಕ್ಷಣ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ವರಿಷ್ಠರು ಕವಿತಾರನ್ನು ಮೇಯರ್ ಹುದ್ದೆಯಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಆರೋಪ ಸುಳ್ಳು: ಮೇಯರ್
ಮಂಗಳೂರು: “ನಾನು ವಾಸವಿರುವ ಅಪಾರ್ಟ್‌ಮೆಂಟ್‌ನ ವಾಚ್‌ಮನ್, ಅವರ ಪತ್ನಿ ಮತ್ತು ಮಗುವಿನ ಮೇಲೆ ಹಲ್ಲೆ ಮಾಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಆರೋಪ’ ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಅವರು, ತಾನು ವಾಸವಿರುವ ಅಪಾರ್ಟ್‌ಮೆಂಟ್‌ನಲ್ಲಿ ಆ ದಿನ ನಡೆದ ಮಕ್ಕಳ ನಡುವಿನ ಜಗಳಕ್ಕೆ ಸಂಬಂಧಿ ಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ತಂದು ಮಾಧ್ಯಮದ ಮುಂದೆ ಪ್ರದರ್ಶಿಸಿದ್ದಾರೆ. ಬಳಿಕ ಮಾತನಾಡಿದ ಅವರು, “ದೀಪಾವಳಿ ದಿನದಂದು ನನ್ನ ಮಗಳು ಪಟಾಕಿ ಹೊಡೆಯುತ್ತಿರುವ ಸಮಯದಲ್ಲಿ ವಾಚ್‌ಮನ್‌ನ ಪತ್ನಿಯು ನನ್ನ ಮಗಳನ್ನು ಅರ್ಪಾಮೆಂಟ್ ಆವರಣದಿಂದ ಅಟ್ಟಿಸಿಕೊಂಡು ಹೋಗಿದ್ದು, ಆಕೆ ರಸ್ತೆ ಕಡೆಗೆ ಓಡಿ ಹೋಗಿದ್ದಾಳೆ. ಒಂದುವೇಳೆ, ರಸ್ತೆಗೆ ಅಟ್ಟಾಯಿಸಿಕೊಂಡು ಹೋದಾಗ, ನನ್ನ ಮಗಳಿಗೆ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆಯಾಗುತ್ತಿದ್ದರು?’ ಎಂದು ಪ್ರಶ್ನಿಸಿದ್ದಾರೆ. “ಆದರೆ ಆ ದಿನ ನಾನು ಊರಿನಲ್ಲಿ ಇರಲಿಲ್ಲ. ಮನೆಗೆ ಬಂದ ಬಳಿಕ ಈ ಬಗ್ಗೆ ವಾಚ್‌ಮನ್ ಮನೆಗೆ ತೆರಳಿ ಪ್ರಶ್ನಿಸಿದ್ದು ನಿಜ. ಈ ಬಗ್ಗೆ ಪೊಲೀಸ್ ದೂರು ನೀಡುತ್ತೇನೆ ಎಂದು ಎಚ್ಚರಿಕೆ ಕೊಟ್ಟು ಅವರ ಮನೆಯಿಂದ ಹೊರಬಂದಿದ್ದೆ. ಆದರೆ ನಾನು ಮಗುವಿನ ಮೇಲೆ ಅಥವಾ ಪತ್ನಿ ಮೇಲೆ ಹಲ್ಲೆ ಮಾಡಿಲ್ಲ. ಆ ಮಗುವಿನಷ್ಟೇ ಚಿಕ್ಕ ಮಗು ನನಗೂ ಇದೆ ಎಂದರು. “ಈ ಪ್ರಕರಣ ಅಲ್ಲಿಗೇ ಮುಕ್ತಾಯವಾಗಿ ಹೋಗಿತ್ತು. ಆದರೆ ಗುರುವಾರ ರಾತ್ರಿ ಬಿಜೆಪಿಯ ಪೂಜಾ ಪೈ ಮತ್ತು ರೂಪಾ ಬಂಗೇರ ಅವರು ಅಪಾರ್ಟ್‌ಮೆಂಟ್‌ಗೆ ಬಂದು 25 ನಿಮಿಷ ವಾಚ್‌ಮನ್ ಕುಟುಂಬದವರ ಜತೆ ಸಮಾಲೋಚನೆ ನಡೆಸಿದ್ದಾರೆ. ಇದು ಸಿಸಿ ಕೆಮರಾದಲ್ಲಿಯೂ ಸೆರೆಯಾಗಿದೆೆ. ಈ ಬಗ್ಗೆ ಅವರು ನನ್ನ ಬಳಿಯೂ ಮಾತನಾಡಬಹುದಿತ್ತು. ಅದುಬಿಟ್ಟು, ಈಗ ಏಕಾಏಕಿ, ಮಗು ಹಾಗೂ ಮಹಿಳೆ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪ ಹೊರಿಸಲಾಗುತ್ತಿದ್ದು, ರಾಜಕೀಯ ಪ್ರೇರಿತವಾಗಿದೆ’ ಎಂದು ಕವಿತಾ ಸನಿಲ್ ಹೇಳಿದ್ದಾರೆ.