ಬೆಂಗಳೂರು: ಪ್ರತಿ ವಾರ ಭೇಟಿ ನೀಡಿ ಪರಿಶೀಲಿಸಿದರೂ ಕೆ.ಆರ್.ಮಾರುಕಟ್ಟೆ ಸ್ವತ್ಛತೆಗೆ ಗಮನಹರಿಸದ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಮೇಯರ್ ಗಂಗಾಂಬಿಕೆ ಸಿಡಿಮಿಡಿಗೊಂಡರು.
ಕೆ.ಆರ್.ಮಾರುಕಟ್ಟೆಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿದಾಗ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಕಂಡ ಮೇಯರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕರ್ತವ್ಯ ಲೋಪಕ್ಕೆ ಸಂಬಂಧಪಟ್ಟಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದರು.
ಮಾರುಕಟ್ಟೆಯಲ್ಲಿ ಪರಿಶೀಲಿಸುವಾಗ ಕಳೆದ ಮೂರು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗಿಲ್ಲವೆಂದು ವ್ಯಾಪಾರಿಗಳು, ಮೇಯರ್‌ಗೆ ದೂರು ನೀಡಿದರು. ಇದರಿಂದ ಇನ್ನಷ್ಟು ಕೋಪಗೊಂಡ ಮೇಯರ್, ಹಲವು ಬಾರಿ ಸೂಚನೆ ನೀಡಿದರೂ, ಕ್ರಮಕ್ಕೆ ಮುಂದಾಗುವುದಿಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೇರೆ ಇಲಾಖೆಗಳಿಂದ ವರ್ಗಾವಣೆ ಮಾಡಿಸಿಕೊಂಡು ಬಿಬಿಎಂಪಿಗೆ ಬರುತ್ತಾರೆ. ಆದರೆ, ಕೆಲಸ ಮಾಡಲು ಆಸಕ್ತಿ ತೋರುವುದಿಲ್ಲ. ಇವರ ನಿರ್ಲಕ್ಷ್ಯದಿಂದಾಗಿ ಬಿಬಿಎಂಪಿ ಜನರ ಟೀಕೆಗೆ ಗುರಿಯಾಗಬೇಕಾಗಿದೆ. ಹಸಿ ತ್ಯಾಜ್ಯ ವಿಲೇವಾರಿಗೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಹೀಗಿದ್ದರೂ ಏಕೆ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮೇಯರ್ ಸೂಚನೆ ಹಿನ್ನೆಲೆಯಲ್ಲಿ ತಕ್ಷಣವೇ 4 ಜೆಸಿಬಿಗಳು ಹಾಗೂ ಟ್ರಾಕ್ಟರ್‌ಗಳನ್ನು ತರಿಸಿದ ಅಧಿಕಾರಿಗಳು ಅಲ್ಲಿದ್ದ ತ್ಯಾಜ್ಯರಾಶಿಯನ್ನು ತೆರವುಗೊಳಿಸಿದರು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೇಯರ್ ಎಚ್ಚರಿಕೆ ನೀಡಿದರು.
ಗೋಡೆಗಳಿಗೆ ಬಣ್ಣ ಬಳಿದ ಮೇಯರ್: ಸ್ವತ್ಛತೆಗೆ ಮೊದಲಿನಿಂದಲೂ ಆದ್ಯತೆ ನೀಡಿರುವ ಮೇಯರ್ ಭಾನುವಾರ ವಿವಿಧ ಸ್ವಯಂ ಸೇವಾ ಸಂಘಟನೆಗಳೊಂದಿಗೆ ಕೆ.ಆರ್.ಮಾರುಕಟ್ಟೆಯಿಂದ ಸಿರ್ಸಿ ವೃತ್ತದ ಮೇಲ್ಸೇತುವೆ ತಡೆಗೋಡೆಗಳಿಗೆ ಬಣ್ಣ ಬಳಿದರು. ನಂತರ ಸ್ವತ್ಛಗೊಳಿಸಿರುವ ಪ್ರದೇಶದಲ್ಲಿ ಮತ್ತೆ ಅನೈರ್ಮಲಿಕರಣ ಕಂಡುಬಂದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು.