ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮತ ಚಲಾಯಿಸಲು ಅರ್ಹರಾಗಿರುವ ಶಾಸಕರು ಮತ್ತು ಸಂಸದರ ಪಟ್ಟಿಯನ್ನು ಸಿದ್ಧಪಡಿಸಿರುವ ಕೌನ್ಸಿಲ್ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಕೆ ಮಾಡಿದ್ದಾರೆ.
ಪ್ರಸಕ್ತ ಸಾಲಿನ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ 198 ಬಿಬಿಎಂಪಿ ಸದಸ್ಯರು ಮತ್ತು 68 ಶಾಸಕರು, ಸಂಸದರು, ವಿಧಾನ ಪರಿಷತ್ತ್ ಸದಸ್ಯರು ಹಾಗೂ ರಾಜ್ಯ ಸಭೆಯ ಸದಸ್ಯರು ಸೇರಿ ಒಟ್ಟು 266 ಜನರು ಮತ ಚಲಾವಣೆ ಮಾಡಲಿದ್ದಾರೆ.
ಮೇಯರ್ ಜಿ.ಪದ್ಮಾವತಿ ಹಾಗೂ ಉಪಮೇಯರ್ ಎಂ.ಆನಂದ್ ಅವರ ಅಧಿಕಾರ ಅವಧಿ ಸೆ.28ಕ್ಕೆ ಪೂರ್ಣಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣೆ ಪೂರ್ಣ ಸಿದ್ಧತೆ ನಡೆಸಿಕೊಳ್ಳುವ ಬಿಬಿಎಂಪಿ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಎಲ್ಲ ವಾರ್ಡ್‌ಗಳಿಂದ ಮತದಾರರ ಪಟ್ಟಿಯನ್ನು ತರಿಸಿಕೊಂಡಿರುವ ಅಧಿಕಾರಿಗಳು ಅಂತಿಮ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದು, ಪಟ್ಟಿಯನ್ನು ಪರಿಶೀಲಿಸಿದ ಬಳಿಕ ಚುನಾವಣೆಯ ದಿನಾಂಕವನ್ನು ಅವರು ಪ್ರಕಟಿಸಲಿದ್ದಾರೆ.
ಮ್ಯಾಜಿಕ್ ನಂಬರ್ 134: ಸದ್ಯ ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿರುವ ಮತದಾರರ ಪಟ್ಟಿಯಂತೆ ಒಟ್ಟು 68 ಬಿಬಿಎಂಪಿ ಸದಸ್ಯೆàತರ ಜನಪ್ರತಿನಿಧಿಗಳು ಮತ ಚಾಲಾವಣೆ ಮಾಡಲಿದ್ದು, ಅದರಲ್ಲಿ 28 ಶಾಸಕರು, ವಿಧಾನ ಪರಿಷತ್ ಸದಸ್ಯರು, 10 ರಾಜ್ಯಸಭಾ ಸದಸ್ಯರು ಮತ್ತು 5 ಲೋಕಸಭಾ ಸದಸ್ಯರಿದ್ದಾರೆ. ಒಟ್ಟಾರೆ 266 ಜನರು ಮತ ಚಲಾಯಿಸಬೇಕಿದ್ದು, ಈ ಬಾರಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೇರಲು 134 ಮತಗಳ ಅವಶ್ಯಕತೆಯಿದೆ.
-ಬಿಜೆಪಿ 124
-ಕಾಂಗ್ರೆಸ್ 109
-ಜೆಡಿಎಸ್ 24
-ಪಕ್ಷೇತರರು 9
* ಮೇಯರ್: ಪರಿಶಿಷ್ಟ ಜಾತಿ
* ಉಪ ಮೇಯರ್: ಸಾಮಾನ್ಯ (ಮಹಿಳೆ)