Advertisement

ಬೆಳಗಾವಿ ಪಾಲಿಕೆಗೆ ಕನ್ನಡಿಗ ಮೇಯರ್‌

06:00 AM Mar 02, 2018 | Team Udayavani |

ಬೆಳಗಾವಿ: ಮರಾಠಿ ಭಾಷಿಕ ಸದಸ್ಯರ ಬಹುಮತವಿದ್ದರೂ ಮೀಸಲು ಭಾಗ್ಯ ಒಲಿದು ಬಂದಿದ್ದರಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರಾದ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ ಮೇಯರ್‌ ಆಗಿ ಅವಿರೋಧ ಆಯ್ಕೆಯಾಗಿದ್ದಾರೆ. ಮರಾಠಿ ಭಾಷಿಕ ಸದಸ್ಯೆಯಾಗಿದ್ದರೂ ಮೂಲತಃ ಕನ್ನಡದವರಾದ ಮಧುಶ್ರೀ ಅಪ್ಪಾಸಾಹೇಬ ಪೂಜಾರಿ 8 ಮತಗಳ ಅಂತರದಿಂದ ಉಪಮೇಯರ್‌
ಆಗಿ ಆಯ್ಕೆಯಾದರು. ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ 20ನೇ ಅವಧಿಯ ಮೇಯರ್‌-ಉಪಮೇಯರ್‌ ಚುನಾವಣೆಯಲ್ಲಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘನ್ನವರ ಈ ಇಬ್ಬರ ಹೆಸರನ್ನು ಘೋಷಿಸಿದರು. ಮೇಯರ್‌ ಸ್ಥಾನ ಎಸ್‌ಟಿ ಮೀಸಲು ಹಾಗೂ ಉಪಮೇಯರ್‌ ಸ್ಥಾನಕ್ಕೆ ಪ್ರವರ್ಗ ಆ ಮಹಿಳೆಗೆ ನಿಗದಿ ಪಡಿಸಲಾಗಿತ್ತು. ಎಸ್‌ಟಿ ಮೀಸಲು ಕನ್ನಡ ಸದಸ್ಯರಲ್ಲಿ ಬಸಪ್ಪ ಚಿಕ್ಕಲದಿನ್ನಿ ಹಾಗೂ ಸುಚೇತಾ ಗಂಡಗುದರಿ ಇದ್ದರು.

Advertisement

ಚಿಕ್ಕಲದಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಯಿತು. ಉಪಮೇಯರ್‌ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಇಬ್ಬರು ಮರಾಠಿ ಭಾಷಿಕ ಸದಸ್ಯರು ಹಿಂಪಡೆದರು. ನಂತರ ಕನ್ನಡದ ಶಾಂತಾ ಉಪ್ಪಾರ ಹಾಗೂ ಮರಾಠಿಯ ಮಧುಶ್ರೀ ಪೂಜಾರಿ ಮಾತ್ರ ಕಣದಲ್ಲಿ ಉಳಿದರು. ಹೀಗಾಗಿ ಮತದಾನ ನಡೆದು ಶಾಂತಾ 23 ಮತ ಪಡೆದರೆ, ಮಧುಶ್ರೀ 31 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದರು. ಮತ ಚಲಾಯಿಸಬೇಕಾದ ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಸತೀಶ ಜಾರಕಿಹೊಳಿ, ಫಿರೋಜ ಸೇಠ ಹಾಗೂ ಸಂಜಯ ಪಾಟೀಲ ಗೈರು ಹಾಜರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next