ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳು, ಸ್ವಯಂ ಸೇವಕರೊಂದಿಗೆ ಮೇಯರ್ ಗಂಗಾಂಬಿಕೆ ಸೋಮವಾರ ಸಭೆ ನಡೆಸಿ ಸಲಹೆ ಪಡೆದುಕೊಂಡರು.
ಫ್ರೆಂಡ್ಸ್ ಆಫ್ ಲೇಕ್ಸ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ನಗರದ ಕೆರೆಗಳ ಸ್ಥಿತಿಗತಿಗಳ ಕುರಿತು ಮೇಯರ್ ಮಾಹಿತಿ ನೀಡಿದರು. ಜತೆಗೆ ಕೆರೆಗಳ ಸಂರಕ್ಷಣೆಗೆ ಪಾಲಿಕೆಯಿಂದ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ನಗರದಲ್ಲಿರುವ ಎಲ್ಲ ಕೆರೆಗಳು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, 224ಕ್ಕೂ ಹೆಚ್ಚು ಕೆರೆಗಳ ಪೈಕಿ ಬಹುಪಾಲು ಕೆರೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿದೆ. ಇದರೊಂದಿಗೆ ಕೆರೆ ಅಂಗಳದಲ್ಲಿ ಘನತ್ಯಾಜ್ಯ ಸುರಿಯುವುದು ಮುಂದುವರಿದಿದ್ದು, ಕಟ್ಟಡ ತ್ಯಾಜ್ಯ ಭಾರೀ ಪ್ರಮಾಣದಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಇವೆಲ್ಲವುಗಳಿಂದ ಹಂತ ಹಂತವಾಗಿ ಕೆರೆ ಒತ್ತುವರಿಯಾಗುತ್ತಿವೆ. ಆ ನಿಟ್ಟಿನಲ್ಲಿ ಪಾಲಿಕೆಯಿಂದ ಕೆರೆಗಳ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ನಂತರ ಮಾತನಾಡಿದ ಮೇಯರ್ ಗಂಗಾಂಬಿಕೆ, ನಗರದ ಎಲ್ಲ ಕೆರೆಗಳನ್ನು ಸಂರಕ್ಷಿಸಲು ಪಾಲಿಕೆ ಬದ್ಧವಾಗಿದೆ.
ಕೆರೆ ಸಮಿತಿಗಳೊಂದಿಗೆ ಆಗಾಗ ಸಭೆಗಳನ್ನು ನಡೆಸಿ ಮಾಹಿತಿ ಪಡೆಯಲಾಗುವುದು. ಜತೆಗೆ ಸ್ವಯಂ ಸೇವಕರು ಸಲಹೆ ನೀಡಿರುವಂತೆ ವಾರ್ಡ್ ಕಮಿಟಿ ಸಭೆಗಳಲ್ಲಿಯೂ ಆಯಾ ವ್ಯಾಪ್ತಿಯ ಕೆರೆಗಳ ಸ್ಥಿತಿಗತಿಗಳನ್ನು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ವಿವರಿಸಿದರು.