Advertisement
ಕಟ್ಟಡವೊಂದರ ಪಾರ್ಕಿಂಗ್ ಜಾಗಕ್ಕೆ ಮೀಸಲಿಟ್ಟ ನೆಲಮಹಡಿಯಲ್ಲಿ ಸ್ಕಿಲ್‌ಗೇಮ್ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರೊಬ್ಬರ ದೂರಿನ ಮೇರೆಗೆ ಮಧ್ಯಾಹ್ನ 4.30ರ ವೇಳೆಗೆ ಮೇಯರ್ ದಾಳಿ ನಡೆಸಿದರು. ದಾಳಿ ಮಾಡುತ್ತಿದ್ದಂತೆ ಸೆಂಟರ್‌ನ ಎರಡೂ ಭಾಗದಲ್ಲಿರುವ 6 ಬಾಗಿಲುಗಳ ಮೂಲಕ ಸ್ಕಿಲ್‌ಗೇಮ್‌ನಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳೂ ಸೇರಿದಂತೆ ಒಳಗಿದ್ದವರು ಎದ್ದು ಬಿದ್ದು ಓಡತೊಡಗಿದರು. ಸೆಂಟರ್ ಒಳಗೆ ಸುಮಾರು 10ಕ್ಕೂ ಅಧಿಕ ಬಗೆಯ ಜೂಜು ಆಟಗಳಿಗೆ ಬಳಸುವ ನಾನಾ ಉಪಕರಣಗಳಿದ್ದವು. ಏರೋ ಗೇಮ್ಸ್, ಲೂಡ, ಗುಡುಗುಡು, 5ಕ್ಕೂ ಅಧಿಕ ವೀಡಿಯೋ ಗೇಮ್, ತ್ರಿ ಕಾರ್ಡ್‌ಗೇಮ್ಸ್ ಸೇರಿದಂತೆ ಹಲವು ಬಗೆಯ ಗೇಮ್ಸ್‌ಗಳಿದ್ದವು. ಸೆಂಟರ್‌ನ ಒಳಗೆ, ಹೊರಗೆ, ರಸ್ತೆಗೆ ಸುಮಾರು 10ರಷ್ಟು ಸಿಸಿ ಕೆಮರಾ ಅಳವಡಿಸಲಾಗಿತ್ತು.ಮೇಯರ್ ದಾಳಿ ಮಾಡಿದ ಬಳಿಕ ಪೊಲೀಸ್ ಕಮಿಷನರ್ ಅವರಿಗೆ ಮೇಯರ್ ಕರೆ ಮಾಡಿ ತತ್‌ಕ್ಷಣ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿಕೊಡುವಂತೆ ಹೇಳಿದರೂ ಅರ್ಧ ತಾಸು ತನಕ ಪೊಲೀಸರು ಇಲ್ಲಿಗೆ ಬರಲೇ ಇಲ್ಲ. ಆ ಬಳಿಕ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಮಾತ್ರ ಬಂದರು. ಇದರಿಂದ ಕೋಪಗೊಂಡ ಮೇಯರ್ ಅವರು, ‘ಪೊಲೀಸ್ ಹಿರಿಯ ಅಧಿಕಾರಿಗಳು ಅವರೇ ಇಲ್ಲಿಗೆ ಬರಲಿ. ಇಲ್ಲದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ’ ಎಂದರು. ಬಳಿಕ ಇನ್‌ಸ್ಪೆಕ್ಟರ್ ಮಾರುತಿ ನಾಯ್ಕ ಸ್ಥಳಕ್ಕೆ ಬಂದರು.
Related Articles
Advertisement
ಈ ಮಧ್ಯೆ ಸ್ಕಿಲ್ ಗೇಮ್‌ನ ಸಿಬಂದಿಯೊಬ್ಬರು ಮಾತನಾಡಿ, ‘ಹಲವು ಸಮಯದಿಂದ ಸ್ಕಿಲ್‌ಗೇಮ್ ಸಂಪೂರ್ಣ ಬಂದ್ ಆಗಿತ್ತು. ಆದರೆ ಹಿಂದಿನ ಪೊಲೀಸ್ ಕಮಿಷನರ್ ಚಂದ್ರಶೇಖರ್ ವರ್ಗವಾದ ಮೇಲೆ ಮತ್ತೆ ಆರಂಭಿಸಿದ್ದೇವೆ. ರೀ ಓಪನ್ ಮಾಡಿ ಕೆಲವೇ ಸಮಯ ಆದದ್ದಷ್ಟೆ’ ಎಂದು ಹೇಳಿದರು.
ತಾಯಿಯೊಬ್ಬರ ಕಣ್ಣೀರು ಸಹಿಸಲಾಗದೆ ದಾಳಿದಾಳಿ ಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿದ ಮೇಯರ್ ಕವಿತಾ ಸನಿಲ್ ಅವರು, ‘ಮಧ್ಯಾಹ್ನ ತಾಯಿಯೊಬ್ಬರು ನನಗೆ ಕರೆ ಮಾಡಿ, ನನ್ನ ಮಗ ಪ್ರತೀ ದಿನ ಹಣ ದುಂದುವೆಚ್ಚ ಮಾಡುತ್ತಿದ್ದಾನೆ. ಮನೆಯವರ ಯಾರ ಮಾತಿಗೂ ಕೇಳುತ್ತಿಲ್ಲ. ಪ್ರತೀ ದಿನ ಹಣ ತೆಗೆದುಕೊಂಡು ಹೋಗುತ್ತಿದ್ದ. ಈ ಬಗ್ಗೆ ನಾವು ಆತನನ್ನು ಪರಿಶೀಲಿಸಿದಾಗ ಸ್ಕಿಲ್ ಗೇಮ್‌ನಲ್ಲಿ ಹಣ ತೊಡಗಿಸುವ ಬಗ್ಗೆ ತಿಳಿದು ಬಂತು. ನನ್ನ ಮಗನ ಭವಿಷ್ಯವೇ ಹೋಯಿತು. ಆತ ನಮ್ಮನ್ನೆಲ್ಲ ತಿರಸ್ಕರಿಸುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಈ ಮಾತು ಕೇಳಿ ನನಗೆ ತುಂಬಾ ನೋವಾಗಿತ್ತು. ಜತೆಗೆ ಮಂಗಳೂರು ವ್ಯಾಪ್ತಿಯಲ್ಲಿ ಸ್ಕಿಲ್ ಗೇಮ್, ಗ್ಯಾಂಬ್ಲಿಂಗ್, ಮಸಾಜ್ ಸೆಂಟರ್‌ಗೆ ಅವಕಾಶವೇ ಇಲ್ಲ. ಪೊಲೀಸರಲ್ಲಿ ಇಂತಹುದನ್ನು ತೆರವು ಮಾಡುವಂತೆ ಸೂಚನೆ ಕೂಡ ನೀಡಲಾಗಿತ್ತು. ಹೀಗಿರುವಾಗ ಅಧಿಕಾರಿಗಳ ಜತೆಗೆ ನಾನೇ ಖುದ್ದಾಗಿ ದಾಳಿ ಮಾಡಿದಾಗ, ಸೆಂಟರ್‌ನ ಒಳಗೆ ವಿದ್ಯಾರ್ಥಿಗಳು, ಹಿರಿಯರು ಇರುವುದು ಗೊತ್ತಾಗಿದೆ. ನಿಜಕ್ಕೂ ಯುವ ಸಮಾಜವನ್ನು ಈ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಹೀಗಾಗಿ ಪಾಲಿಕೆ ವತಿಯಿಂದ ಬೀಗ ಜಡಿಯಲಾಗಿದೆ. ಮಂಗಳೂರು ವ್ಯಾಪ್ತಿಯಲ್ಲಿರುವ ಉಳಿದ ಇಂತಹ ಸೆಂಟರ್‌ಗೂ ದಾಳಿ ನಡೆಸಲಾಗುವುದು ಎಂದರು.