ಮೈಸೂರು: ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ನ.9ರಿಂದ 12ರವರೆಗೆ ಅಖೀಲ ಭಾರತ ಆಹ್ವಾನಿತ ಪುರುಷ-ಮಹಿಳೆಯರ ಮೇಯರ್ ಕಪ್ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್ ತಿಳಿಸಿದರು.
ನಗರದ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ 4 ದಿನಗಳವರೆಗೆ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪುರುಷರ 16 ಹಾಗೂ ಮಹಿಳೆಯರ 16 ತಂಡಗಳು ಭಾಗವಹಿಸಲಿವೆ. ಸ್ಪರ್ಧಿಗಳಿಗಾಗಿ ಪಾಲಿಕೆಯಿಂದ ವಸತಿ, ಸಾರಿಗೆ ವೆಚ್ಚ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಪಂದ್ಯಾವಳಿ ಉದ್ಘಾಟಕರಾಗಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ಆಟಗಾರರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾಗವಹಿಸುವ ತಂಡಗಳು: ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಮಹೇಂದ್ರ ಅಂಡ್ ಮಹೇಂದ್ರ, ಹರಿಯಾಣದ ಎಂಎಸ್‌ಡಿ, ಹಿತೇಶ್ ಚೆನ್ನೈ, ಭರತ್ ಪೇಂಟರ್, ಪಾಂಡಿಚೇರಿ, ಕೇರಳ, ವಿಜಯ ಬ್ಯಾಂಕ್, ಪೋಸ್ಟಲ್, ಎಚ್‌ಎಂಟಿ ಕಾಲೋನಿ ಬಾಯ್ಸ, ಬಿವೈಎಸ್, ಕ್ಲಾಸಿಕ್ ನ್ಯಾಷಿನಲ್ಸ್, ಆಳ್ವಾಸ್ ಡಿ.ಕೆ, ಕಸ್ಟಮ್ಸ್, ಮೈಸೂರು, ಮಂಡ್ಯ ಮತ್ತು ಯುಪಿ ತಂಡಗಳು ಪಾಲ್ಗೊಳ್ಳಲಿವೆ.
ಅಂತೆಯೇ ಮಹಿಳಾ ವಿಭಾಗ: ಮುಂಬೈ, ಬಾಬಾ ಹರಿದಾಸ್, ಪಾಲಮ್‌ಡೆಲ್ಲಿ, ಸೆಂಟ್ರಲ್ ರೈಲ್ವೆ ಬಾಂಬೆ, ಎಸ್‌ಸಿಆರ್ ಸಿಕಂದರಾಬಾದ್, ದಿಂಡಿಗಲ್, ಶಕ್ತಿ ಟೈಲ್ಸ್, ಕೇರಳ, ಆಂಧ್ರ, ಬೆಸ್ಟ್ ಕೋ (ಕೊಯಮತ್ತೂರ್), ಮಾತ, ಕೇಶವ, ಜೆಕೆಸಿ, ಆಳ್ವಾಸ್ ಡಿ.ಕೆ, ಮೈಸೂರು, ಕೆಎಸ್‌ಪಿ ಬೆಂಗಳೂರು ತಂಡಗಳು ಭಾಗವಹಿಸಲಿವೆ ಎಂದರು.
ಬಹುಮಾನದ ವಿವರ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗಾಗಿ ಬಹುಮಾನದ ಮೊತ್ತವಾಗಿ 8.5 ಲಕ್ಷ ರೂ. ಮೀಸಲಿಡಲಾಗಿದೆ. ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ 1.50 ಲಕ್ಷ ರೂ., ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ 50 ಸಾವಿರ ರೂ. ನಗದು ಬಹುಮಾನ ನಿಗದಿಪಡಿಸಲಾಗಿದೆ. ಇನ್ನೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 1.50 ಲಕ್ಷ ರೂ., ದ್ವಿತೀಯ 1 ಲಕ್ಷ ರೂ., ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ 50 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು.
ಪಂದ್ಯಾವಳಿಗಾಗಿ ಅಂದಾಜು 45 ಲಕ್ಷ ರೂ. ವ್ಯಯವಾಗಲಿದ್ದು, ಪಾಲಿಕೆಯಿಂದ 25 ಲಕ್ಷ ರೂ. ನೀಡಲಾಗುತ್ತಿದೆ. ಉಳಿದ ಮೊತ್ತವನ್ನು ಸಂಘ-ಸಂಸ್ಥೆಗಳು, ಮಾಜಿ ಮೇಯರ್‌ಗಳು, ಪಾಲಿಕೆ ಸದಸ್ಯರು ಹಾಗೂ ಪಾಯೋಜಕರಿಂದ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು. ಮಾಜಿ ಮೇಯರ್‌ಗಳಾದ ಬಿ.ಎಲ್.ಬೈರಪ್ಪ, ಆರ್.ಲಿಂಗಪ್ಪ, ಪುರುಷೋತ್ತಮ್, ಸಂದೇಶ್‌ಸ್ವಾಮಿ ಇದ್ದರು.