Advertisement

ಬೆಸ್ಕಾಂ, ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆದ ಮೇಯರ್‌

12:32 AM Apr 29, 2019 | Lakshmi GovindaRaju |

ಬೆಂಗಳೂರು: ತುಂಡರಿಸಿದ ವಿದ್ಯುತ್‌ ತಂತಿಗಳನ್ನು ಸಮರ್ಪಕವಾಗಿ ಸರಿಪಡಿಸದ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಮೇಯರ್‌ ಗಂಗಾಂಬಿಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಎರಡು ದಿನಗಳ ಹಿಂದೆ ಮಹಾಲಕ್ಷ್ಮೀ ಬಡಾವಣೆಯ ನಾಗಲಿಂಗೇಶ್ವರ ದೇವಸ್ಥಾನದ ಬಳಿ ವಿದ್ಯುತ್‌ ತಂತಿ ಸ್ಪರ್ಶಿಸಿ ಸಾಯಿ ಚರಣ್‌ ಎಂಬ ಬಾಲಕ ತೀವ್ರ ಗಾಯಗೊಂಡಿದ್ದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿದ್ಯುತ್‌ ತಂತಿಗಳು ತುಂಡಾಗಿ ಅವಘಡ ಸಂಭವಿಸುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಏಕೆ ಮುಂದಾಗುತ್ತಿಲ್ಲ. ಜನರಿಗೆ ತೊಂದರೆಯಾಗುತ್ತದೆ ಎಂಬ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುತ್ತಿರುವುದರಿಂದ ಅಮಾಯಕರು ತೊಂದರೆ ಅನುಭವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ನಗರದಲ್ಲಿ ವಿದ್ಯುತ್‌ ತಂತಿಗಳಿಂದ ಆಗುತ್ತಿರುವ ಅವಘಡಗಳ ಕುರಿತಂತೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಉದ್ಯಾನ ಹಾಗೂ ರಸ್ತೆಬದಿಯ ಬೀದಿ ದೀಪಗಳಿಂದ ವಿದ್ಯುತ್‌ ತಂತಿಗಳು ಚಾಚಿಕೊಂಡು ಅಪಾಯಕ್ಕೆ ಎಡಿಮಾಡುತ್ತಿದ್ದರೆ, ಕೂಡಲೇ ಎಚ್ಚೆತ್ತುಕೊಂಡು ಅವುಗಳನ್ನು ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಒಂದೊಮ್ಮೆ ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದ ಅವರು, ವಿದ್ಯುತ್‌ ತಂತಿ ತಗುಲಿ ಆಸ್ಪತ್ರೆ ಸೇರಿರುವ ಬಾಲಕ ಸಾಯಿ ಚರಣ್‌ ಶೀಘ್ರ ಗುಣಮುಖವಾಗಲಿದೆ ಎಂದು ಹಾರೈಸಿರು.

ಆರೋಗ್ಯ ವಿಚಾರಿಸಿದ ಗೋಪಾಲಯ್ಯ: ವಿದ್ಯುತ್‌ ತಂತಿ ಸ್ಪರ್ಶಿಸಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸಾಯಿಚರಣ್‌ ಆರೋಗ್ಯವನ್ನು ಮಹಾಲಕ್ಷ್ಮೀ ಬಡಾವಣೆಯ ಶಾಸಕ ಗೋಪಾಲಯ್ಯ ಭಾನುವಾರ ವಿಚಾರಿಸಿದ್ದಾರೆ.

Advertisement

ಬಳಿಕ ಮಾತನಾಡಿದ ಅವರು, ಬಾಲಕನ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ತಾವೇ ಭರಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಸಾಯಿಚರಣ್‌ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡುವ ಕುರಿತಂತೆ ಸರ್ಕಾರ ಹಾಗೂ ಪಾಲಿಕೆಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಬಾಲಕನ ಆರೋಗ್ಯದಲ್ಲಿ ಚೇತರಿಕೆ: ವಿದ್ಯುತ್‌ ತಂತಿ ಸ್ಪರ್ಶಿಸಿ ಆಸ್ಪತ್ರೆಗೆ ದಾಖಲಾಗಿರುವ ಸಾಯಿಚರಣ್‌ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದ್ದು, ನಮ್ಮೊಂದಿಗೆ ಮಾತನಾಡಿದ್ದಾನೆ ಎಂದು ಬಾಲಕನ ತಂದೆ ಬಸವರಾಜ್‌ ತಿಳಿಸಿದರು.

ನೀತಿ ಸಂಹಿತೆ ಬಳಿಕ ಪರಿಹಾರ: ಇಂತಹ ಅವಘಡಗಳು ಸಂಭವಿಸಿದಾಗ ಹಿಂದೆ ಪಾಲಿಕೆಯಿಂದ ಪರಿಹಾರ ನೀಡಿದ ಮಾದರಿಯಲ್ಲಿಯೇ ಸಾಯಿಚರಣ್‌ ಕುಟುಂಬಕ್ಕೂ ಪರಿಹಾರ ನೀಡಲಾಗುವುದು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಘೋಷಣೆ ಮಾಡುವಂತಿಲ್ಲ. ಹೀಗಾಗಿ ನೀತಿ ಸಂಹಿತೆ ಬಳಿಕ ಹಿಂದೆ ನೀಡಿದ ಮಾದರಿಯಲ್ಲಿಯೇ ಅವರಿಗೂ ಪರಿಹಾರ ಸಿಗಲಿದೆ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next