ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಂದು ಲಾರ್ಡ್ಸ್ ಅಂಗಳದಲ್ಲಿ ನಡೆಯಲಿದೆ. ಮೊದಲ ಪಂದ್ಯ ಅಂತಿಮ ದಿನ ಸುರಿದ ಮಳೆಯ ಕಾರಣ ಡ್ರಾನಲ್ಲಿ ಅಂತ್ಯವಾಗಿತ್ತು. ಇದೀಗ ಸರಣಿಯ ಮೊದಲ ಜಯಕ್ಕಾಗಿ ಎರಡೂ ತಂಡಗಳು ಲಾರ್ಡ್ಸ್ ನಲ್ಲಿ ಸೆಣಸಾಡಲಿದೆ.
ಭಾರತದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರು ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದರು. ಹೀಗಾಗಿ ಅನಿವಾರ್ಯವಾಗಿ ರೋಹಿತ್ ಶರ್ಮಾ ಜೊತೆ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ತಂಡದ ಪರ ಹೆಚ್ಚಿನ ಮೊತ್ತವನ್ನೂ ರಾಹುಲ್ ಗಳಿಸಿದ್ದರು.
ಆದರೆ ಇದೀಗ ಮಯಾಂಕ್ ಗುಣಮುಖರಾಗಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಯಾರನ್ನು ಆಡಿಸಬೇಕು ಎಂಬ ಗೊಂದಲ ಆರಂಭವಾಗಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಇದಕ್ಕೆ ಉತ್ತರ ನೀಡಿದ್ದು, ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಸ್ಥಾನದ ಬಗ್ಗೆ ನಮಗೆ ಯಾವುದೇ ಚಿಂತೆಯಿಲ್ಲ. ತಂಡದಲ್ಲಿ ಬ್ಯಾಟ್ಸಮನ್ ಕಡಿಮೆ ಇದ್ದಾರೆ ಎಂದು ನಮಗೆ ಅನಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಲಾರ್ಡ್ಸ್ ಒಲಿಯಬೇಕಾದರೆ ಲಕ್ ಬೇಕು
ಆದರೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ಸಾಧ್ಯತೆ ನಿಚ್ಚಳವಾಗಿದೆ. ಶಾರ್ದೂಲ್ ಠಾಕೂರ್ ಗಾಯಾಳಾಗಿರುವುದರಿಂದ ಈ ಸ್ಥಾನಕ್ಕೆ ಯಾರು ಎಂಬ ಕುತೂಹಲ ಮೂಡಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗದೆ ಅಚ್ಚರಿಗೆ ಕಾರಣರಾಗಿದ್ದ ಪ್ರಧಾನ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ವೇಗಿ ಇಶಾಂತ್ ಶರ್ಮ ರೇಸ್‌ನಲ್ಲಿದ್ದಾರೆ.
ಯಾವುದಕ್ಕೂಅಂತಿಮ ಹನ್ನೊಂದರ ಆಯ್ಕೆಯಲ್ಲಿ ಲಾರ್ಡ್ಸ್ ಪಿಚ್ ಪಾತ್ರ ನಿರ್ಣಾಯಕವಾಗಲಿದೆ. 2018ರಲ್ಲಿ ಭಾರತ ಇಲ್ಲಿ ಆಡಿದಾಗ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿ ಇನ್ನಿಂಗ್ಸ್ ಸೋಲಿಗೆ ತುತ್ತಾಗಿತ್ತು. ಇಂಗ್ಲೆಂಡ್ ಅಂಥದೇ ಗ್ರೀನ್ ಟಾಪ್ ಟ್ರ್ಯಾಕ್’ ಉಳಿಸಿಕೊಂಡರೆ ಅಚ್ಚರಿ ಇಲ್ಲ.