Advertisement

ವಿಂಡೀಸ್‌ ವಿರುದ್ಧ ಮಿಂಚಿದ ಭವ್ನೆ , ಅಗರ್ವಾಲ್‌

06:00 AM Sep 30, 2018 | Team Udayavani |

ವಡೋದರ: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ್ಗೊಂಡ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಮೊದಲ ದಿನದ ಅಂತ್ಯಕ್ಕೆ 6 ವಿಕೆಟಿಗೆ 360 ರನ್‌ ಬಾರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದೆ.

Advertisement

ಆತಿಥೇಯ ತಂಡದ ಪರ ಅಂಕಿತ್‌ ಭವ್ನೆ ಆಕರ್ಷಕ ಶತಕ ಹೊಡೆದರೆ (ಅಜೇಯ 116), ಆರಂಭಕಾರ ಮಾಯಾಂಕ್‌ ಅಗರ್ವಾಲ್‌ 90 ರನ್‌ ಬಾರಿಸಿ ಮಿಂಚಿದರು. ಪೃಥ್ವಿ ಶಾ (8) ಮತ್ತು ಹನುಮ ವಿಹಾರಿ (3) ಅವರನ್ನು ಬೇಗನೇ ಕಳೆದುಕೊಂಡ ಮಂಡಳಿ ಬಳಗಕ್ಕೆ ಅಗರ್ವಾಲ್‌, ನಾಯಕ ಕರುಣ್‌ ನಾಯರ್‌ (29), ಶ್ರೇಯಸ್‌ ಅಯ್ಯರ್‌ (61) ಆಧಾರವಾದರು. ಕರ್ನಾಟಕದ ಜೋಡಿ ಅಗರ್ವಾಲ್‌-ನಾಯರ್‌ 3ನೇ ವಿಕೆಟಿಗೆ 92 ರನ್‌ ಪೇರಿಸಿತು. 111 ಎಸೆತ ನಿಭಾಯಿಸಿದ ಅಗರ್ವಾಲ್‌ 14 ಬೌಂಡರಿ, 2 ಸಿಕ್ಸರ್‌ ಎತ್ತಿದರು. ಅವರ ಶತಕದ ಕನಸಿಗೆ ದೇವೇಂದ್ರ ಬಿಶೂ ಅಡ್ಡಿಯಾದರು.

6ನೇ ಕ್ರಮಾಂಕದಲ್ಲಿ ಆಡಲಿಳಿದ ಅಂಕಿತ್‌ ಭವ್ನೆ ವಿಂಡೀಸ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 191 ಎಸೆತಗಳಿಂದ 116 ರನ್‌ ಪೇರಿಸಿದರು. ಇದರಲ್ಲಿ 15 ಬೌಂಡರಿ ಒಳಗೊಂಡಿತ್ತು. ಅಯ್ಯರ್‌ ಅವರದು ಬಿರುಸಿನ ಆಟವಾಗಿತ್ತು. ಅವರ 61 ರನ್‌ ಕೇವಲ 64 ಎಸೆತಗಳಿಂದ ಬಂತು. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 3 ಫೋರ್‌.

ವೆಸ್ಟ್‌ ಇಂಡೀಸ್‌ ಪರ ದೇವೇಂದ್ರ ಬಿಶೂ 3, ಶಾನನ್‌ ಗ್ಯಾಬ್ರಿಯಲ್‌ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next