Advertisement

Mayank Agarwalವಿಮಾನದಲ್ಲಿ ಅಸ್ವಸ್ಥ ಪ್ರಕರಣ; ಪೊಲೀಸ್ ದೂರು ದಾಖಲಿಸಿದ ಕರ್ನಾಟಕ ರಣಜಿ ನಾಯಕ

08:54 AM Jan 31, 2024 | Team Udayavani |

ಅಗರ್ತಲಾ: ವಿಮಾನದಲ್ಲಿ ದಿಢೀರ್ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರು ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತನ್ನ ಮ್ಯಾನೇಜರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಅಗರ್ತಲಾದಲ್ಲಿ ರಣಜಿ ಪಂದ್ಯವನ್ನು ಆಡಿದ ನಂತರ ಮಯಾಂಕ್ ವಿಮಾನದಲ್ಲಿ ಸೂರತ್‌ ಗೆ ಪ್ರಯಾಣಿಸುತ್ತಿದ್ದರು. ಅವರು ವಿಮಾನದ ಆಸನದ ಪೌಚ್ ನಲ್ಲಿದ್ದ ಜ್ಯೂಶ್ ಕುಡಿದ ತಕ್ಷಣ ತಮ್ಮ ಬಾಯಿ ಮತ್ತು ಗಂಟಲಿನಲ್ಲಿ ಅಸ್ವಸ್ಥತೆಯ ಬಗ್ಗೆ ಹೇಳಿಕೊಂಡಿದ್ದು, ನಂತರ ಅವರನ್ನು ಡಿಬೋರ್ಡ್ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಮಯಾಂಕ್ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದು, ಯಾವುದೇ ಅಪಾಯದಿಂದ ದೂರಾಗಿದ್ದಾರೆ.

ಇಂಡಿಗೋ ವಿಮಾನದಲ್ಲಿದ್ದ ದ್ರವ ಪದಾರ್ಥವನ್ನು ಸೇವಿಸುತ್ತಿದ್ದಂತೆ ಮಯಾಂಕ್ ಅವರಿಗೆ ಹೊಟ್ಟೆ ನೋವು ಶುರುವಾಗಿದ್ದು, ತುಟಿಗಳು ಊದಿಕೊಂಡಿದೆ. ಅವರು ಎರಡು ಬಾರಿ ವಾಂತಿ ಮಾಡಿದ್ದಾರೆ ಎನ್ನಲಾಗಿದೆ.

ಅಗರ್ವಾಲ್ ತನ್ನ ಮ್ಯಾನೇಜರ್ ಮೂಲಕ ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದಾರೆ. “ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮಯಾಂಕ್ ಅಗರ್ವಾಲ್ ಅವರು ಈಗ ಸ್ಥಿರವಾಗಿದ್ದಾರೆ. ಆದರೆ ಅವರ ಮ್ಯಾನೇಜರ್ ಈ ವಿಷಯದ ತನಿಖೆಗಾಗಿ NCCPS (ಹೊಸ ರಾಜಧಾನಿ ಸಂಕೀರ್ಣ ಪೊಲೀಸ್ ಠಾಣೆ) ಅಡಿಯಲ್ಲಿ ನಿರ್ದಿಷ್ಟ ದೂರು ದಾಖಲಿಸಿದ್ದಾರೆ” ಎಂದು ಎಸ್ಪಿ ಪಶ್ಚಿಮ ತ್ರಿಪುರಾ ಕಿರಣ್ ಕುಮಾರ್ ಪಿಟಿಐಗೆ ತಿಳಿಸಿದರು.

Advertisement

“ಅವರ ಮ್ಯಾನೇಜರ್ ಪ್ರಕಾರ ವಿಮಾನದಲ್ಲಿ ಕುಳಿತಾಗ ಅವರ ಮುಂದೆ ಪೌಚ್ ಇತ್ತು. ಅವರು ಸ್ವಲ್ಪ ಹೆಚ್ಚು ಕುಡಿಯಲಿಲ್ಲ ಆದರೆ ಇದ್ದಕ್ಕಿದ್ದಂತೆ ಅವರ ಬಾಯಿಯಲ್ಲಿ ಕಿರಿಕಿರಿ ಕಾಣಿಸಿಕೊಂಡಿತು, ಅವರಿಗೆ ಮಾತನಾಡಲೂ ಸಾಧ್ಯವಾಗಲಿಲ್ಲ, ಕೂಡಲೇ ಅವರನ್ನು ಐಎಲ್ಎಸ್ ಆಸ್ಪತ್ರೆಗೆ ಕರೆತರಲಾಯಿತು. ಅವರ ಬಾಯಿಯಲ್ಲಿ ಊತ ಮತ್ತು ಹುಣ್ಣುಗಳಿದ್ದವು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಯಾಂಕ್ ಅಗರ್ವಾಲ್ ಅವರು ರೈಲ್ವೇಸ್ ವಿರುದ್ದದ ಮುಂದಿನ ಪಂದ್ಯವನ್ನು ಆಡುವುದಿಲ್ಲ ಎಂದು ಕೆಎಸ್ ಸಿಎ ಹೇಳಿದೆ. “ಅವರು ಕರ್ನಾಟಕದ ಮುಂದಿನ ಪಂದ್ಯದಲ್ಲಿ (ಫೆಬ್ರವರಿ 2 ರಿಂದ ಆರಂಭ) ಆಡುವುದಿಲ್ಲ. ಆದರೆ ಅದನ್ನು ಹೊರತುಪಡಿಸಿ, ಯಾವುದೇ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ಈಗ ಸ್ಥಿರವಾಗಿದ್ದಾರೆ ಮತ್ತು ನಾವು ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next