Advertisement

ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

12:22 PM Apr 19, 2020 | Naveen |

ಮಾಯಕೊಂಡ: ತರಕಾರಿ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಶನಿವಾರ ಇಲ್ಲಿನ ನಾಡ ಕಚೇರಿಯಲ್ಲಿ ತಹಶೀಲ್ದಾರ್‌ ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ದೇಶದಲ್ಲಿ ಕೋವಿಡ್ ಸೊಂಕು ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯ ರೈತರು ಬೆಳೆದ ಟೊಮ್ಯಾಟೋ, ಬದನೆ, ಮೆಣಸಿನಕಾಯಿ, ಕೋಸು, ಕುಂಬಳಕಾಯಿ, ಈರುಳ್ಳಿ ಇನ್ನಿತರ ಬೆಳೆಗಳ ಕಟಾವು ನಡೆಯುತ್ತಿದೆ. ಸ್ಥಳೀಯ ಮಾರಾಟಗಾರರು ಖರೀದಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇನ್ನುಳಿದ ತರಕಾರಿಗಳನ್ನು ಹರ್ಯಾಣಾ, ತೆಲಂಗಾಣ ಮಾದರಿಯಲ್ಲಿ ಸರ್ಕಾರವೇ ಹೋಬಳಿ ಮಟ್ಟದಲ್ಲಿ ಖರೀದಿ ಮಾಡಿ ಮಾರಾಟ ಮಾಡಬೇಕು. ಕಲ್ಲಂಗಡಿ, ಕುಂಬಳಕಾಯಿಯಂತಹ ಬೆಳೆಗಳನ್ನು ಕೋಲ್ಡ್‌ ರೂಂನಲ್ಲಿ ಸಂಗ್ರಹಿಸಿ ಇಡಲು ಜಿಲ್ಲಾಡಳಿತ ರೈತರ ಮನೆಬಾಗಿಲಿಗೆ ವಾಹನ ವ್ಯವಸ್ಥೆಯನ್ನು ಮಾಡಬೇಕು. ಈಗಾಗಲೇ ಮೆಕ್ಕೆಜೋಳ ದರ ಕುಸಿತವಾಗಿರುವುದರಿಂದ ಕೂಡಲೇ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಗಿರೀಶ್‌ ಮಾತನಾಡಿ, ರೈತರು ಬೆಳೆದ ತರಕಾರಿಗಳನ್ನು ಒಂದು ಕಡೆ ಸಂಗ್ರಹಣೆ ಮಾಡಿದರೆ ಮನೆ ಬಾಗಿಲಿಗೆ ಉಚಿತ ವಾಹನ ಕಳುಹಿಸಿಕೊಡಲಾಗುವುದು. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಈ ಸಂಬಂಧ ಸೂಚನೆ ನೀಡಲಾಗಿದೆ. ಆದ್ದರಿಂದ ರೈತರು ಬೆಳೆಗಳನ್ನು ಕಟಾವು ಮಾಡುವಾಗ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಉಪ ತಹಶೀಲ್ದಾರ್‌ ಲೋಕೇಶ್‌, ಕಂದಾಯ ನಿರೀಕ್ಷಕ ಅಜ್ಜಪ್ಪ ಪತ್ರಿ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್‌, ಅನಗೋಡು ಭೀಮಣ್ಣ, ಪಾಮೇನಹಳ್ಳಿ ಲಿಂಗರಾಜ್‌, ಮಾಯಕೊಂಡ ಪ್ರತಾಪ್‌, ನಿಂಗಣ್ಣ, ಗೌಡ್ರ ಅಶೋಕ್‌, ಮೇದೆಕೆರಪ್ಪ, ಭರತ್‌, ಹಿಂಡಸಘಟ್ಟೆ ಹನುಮಂತಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next