ಆಹಾರದ ವಿಷಯದಲ್ಲಿ ಬಸವನಗುಡಿ ಏರಿಯಾ ಹಲವು ಮೊದಲುಗಳನ್ನು ದಾಖಲಿಸಿದೆ. ಪ್ರಮುಖವಾಗಿ ಮೊದಲ ದರ್ಶಿನಿ ಹೋಟೆಲ್ ಪ್ರಾರಂಭವಾಗಿದ್ದು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ. ಆ ನಂತರ ಸಾಫ್ಟಿ ಐಸ್‌ಕ್ರೀಮ್‌ಗಳು, ಕಬ್ಬಿನ ಹಾಲಿನ ಅಂಗಡಿಗಳು, ಇಡ್ಲಿ ಹೋಟೆಲ್‌ಗಳು, ರೋಟಿ ಘರ್‌ಗಳು … ಹೀಗೆ ಅ ಯಿಂದ ಅಃವರೆಗೂ ಹಲವು ಹೊಸ ಪ್ರಯೋಗಗಳಾಗಿವೆ. ಆ ಪ್ರಯೋಗಕ್ಕೆ ಹೊಸ ಸೇರ್ಪಡೆಯೆಂದರೆ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿ ಎಂಬ ಎರಡು ಅಂಗಡಿಗಳು. ಉಪಹಾರ ದರ್ಶಿನಿಯ ಪಕ್ಕದಲ್ಲಿ ಎದ್ದ ಈ ಎರಡು ಅಂಗಡಿಗಳು ಅದೆಷ್ಟು ಜನಪ್ರಿಯವಾಗಿವೆಯೆಂದರೆ, ಮೊದಲು ಈ ಎರಡೂ ಅಂಗಡಿಗಳ ಬ್ರಾಂಚ್ ಜಯನಗರದಲ್ಲಿ ಕೆಲವು ತಿಂಗಳ ಹಿಂದೆ ಪ್ರಾರಂಭವಾಯಿತು. ಈಗ ಕತ್ತರಿಗುಪ್ಪೆಯ ಹಳೆಯ ವಾಟರ್ ಟ್ಯಾಂಕ್ ಬಳಿ ಇತ್ತೀಚೆಗೆ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿಯ ಇನ್ನೊಂದು ಹೊಸ ಶಾಖೆ ಪ್ರಾರಂಭವಾಗಿದೆ. ಪ್ರಾರಂಭದ ಮೊದಲೆರೆಡು ದಿನಗಳಂದು ಹೋಳಿಗೆ ಕೊಳ್ಳುವುದಕ್ಕೆ ಬರುವ ಗ್ರಾಹಕರಿಗೆ ಬಂಪರ್ ಆಫರ್ ಸಹ ನೀಡಲಾಗಿದೆ. ಈ ಎರಡೂ ದಿನಗಳ ಕಾಲ, ಮನೆ ಹೋಳಿಗೆಗೆ ಬಂದ ಎಲ್ಲಾ ಗ್ರಾಹಕರಿಗೆ ಸಂಜೆ ಒಂದು ರೂಪಾಯಿಗೆ ಹೋಳಿಗೆ ಕೊಡಲಾಯಿತು. ಇನ್ನು ಮಹಿಳೆಯರಿಗೆ ಹೋಳಿಗೆ ಮಾಡುವ ಪೇಪರ್ ಕೂಡ ಉಚಿತವಾಗಿ ಕೊಡಲಾಗಿತ್ತು.
ಕಳೆದ 18 ವರ್ಷಗಳಿಂದ ಮನೆಯಲ್ಲಿ ಹೋಳಿಗೆ ಮಾಡಿ ಹೋಟೆಲ್ ಮತ್ತು ಅಂಗಡಿಗಳಿಗೆ ಸಪ್ಲೆ„ ಮಾಡುತ್ತಿದ್ದರಂತೆ ಭಾಸ್ಕರ್. ಅಲ್ಲಿ ಹೋಳಿಗೆಗಳು ಚೆನ್ನಾಗಿ ಮಾರಾಟವಾಗುತಿತ್ತಂತೆ. ಅದೊಂದು ದಿನ ಭಾಸ್ಕರ್ ಅವರಿಗೆ ಬೇರೆ ಏನಾದರೂ ಮಾಡಬೇಕು ಅಂತ ಅನಿಸಿದೆ. ಹೋಳಿಗೆಗಳನ್ನು ಮಾಡಿ, ಅಂಗಡಿ ಮತ್ತು ಹೋಟೆಲ್‌ಗಳಿಗೆ ಕೊಡುವುದಕ್ಕಿಂತ, ತಾವೇ ಯಾಕೆ ಒಂದು ಅಂಗಡಿ ಮಾಡಿ ಅದರ ಮೂಲಕ ಮಾರಬಾರದು ಎಂದನಿಸಿದೆ. ಬರೀ ಹೋಳಿಗೆಯಷ್ಟೇ ಸಾಲದು, ಕುರುಕ್ ತಿಂಡಿಗಳಿದ್ದರೆ… ಜನರನ್ನು ಸೆಳೆಯಬಹುದು ಎಂದನಿಸಿದೆ. ಹಾಗನಿಸಿದ್ದೇ ತಡ, ಡಿವಿಜಿ ರಸ್ತೆಯಲ್ಲಿರುವ ಉಪಹಾರ ದರ್ಶಿನಿಯ ಪಕ್ಕ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿ ಎಂಬ ಅಂಗಡಿಗಳನ್ನು ಪ್ರಾರಂಭಿಸಿದ್ದಾರೆ. ಭಾಸ್ಕರ್ ಹಾಗೆ ಅಂಗಡಿ ಶುರು ಮಾಡಿದ್ದೇ ಮಾಡಿದ್ದು, ಜನ ಮನೆಯಲ್ಲಿ ಹೋಳಿಗೆ ಮತ್ತು ಕುರುಕ್ ತಿಂಡಿಗಳನ್ನು ಮಾಡುವುದನ್ನು ಕಡಿಮೆ ಮಾಡಿದ್ದಾರೆ. ತಮಗೆ ಬೇಕಾದ ಹೋಳಿಗೆಗಳನ್ನು, ಕುರುಕ್ ತಿಂಡಿಗಳನ್ನು ಅಲ್ಲಿಂದ ಖರೀದಿಸಿ, ಅಂಗಡಿಯನ್ನು ಜನಪ್ರಿಯಗೊಳಿಸಿದ್ದಾರೆ. ಇದರಿಂದ ಆಗಿದ್ದೇನೆಂದರೆ, ಬಿಝಿನೆಸ್ ಇನ್ನಷ್ಟು ವಿಸ್ತಾರವಾಗಿರುವುದು. ಮುಂಚೆ ಡಿವಿಜಿ ರಸ್ತೆಯಲ್ಲಿ ಮಾತ್ರ ಇದ್ದ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿ ಮಳಿಗೆ ಇದೀಗ ಜಯನಗರ ಮತ್ತು ಕತ್ತರಿಗುಪ್ಪೆಗಳಿಗೂ ವಿಸ್ತರಣೆಗೊಂಡಿವೆ. ಇತ್ತೀಚೆಗೆ ಈ ಎರಡೂ ಅಂಗಡಿಗಳ ಮೂರನೆಯ ಬ್ರಾಂಚ್ ಕತ್ತರಿಗುಪ್ಪೆಯ ಹಳೆಯ ವಾಟರ್ ಟ್ಯಾಂಕ್ ಬಳಿ ಪ್ರಾರಂಭವಾಗಿದೆ. ಜೀ ಟಿವಿಯ “ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ, ಈ ಅಂಗಡಿಯ ಪ್ರಾರಂಭೋತ್ಸವದ ರಿಬ್ಬನ್ ಕತ್ತರಿಸಿದ್ದಾರೆ.
ಈ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿ ಅಂಗಡಿಗಳ ಬಗ್ಗೆ ಗೊತ್ತಿಲ್ಲದೆ ಬೆಂಗಳೂರಿನ ಇತರ ಭಾಗದ ಜನರಿಗೆ ಈ ಮಾಹಿತಿ: ಮೊದಲು “ಮನೆ ಹೋಳಿಗೆ’ಯ ವಿಚಾರದ ಬಗ್ಗೆ ಹೇಳುವುದಾದರೆ ಇಲ್ಲಿ 18ಕ್ಕೂ ಹೆಚ್ಚು ತರಹದ ಹೋಳಿಗೆಗಳು ಸಿಗುತ್ತವೆ. ಸಾಮಾನ್ಯವಾಗಿ ಹೋಳಿಗೆ ಎಂದರೆ ಕಾಯಿ ಮತ್ತು ಬೇಳೆ ಹೋಳಿಗೆಗಳು ಮೊದಲು ನೆನಪಿಗೆ ಬರುತ್ತವೆ. ಆದರೆ, ಇಲ್ಲಿ ಅವೆರಡರ ಜೊತೆಗೆ ಖರ್ಜೂರ, ಬಾದಾಮಿ, ಕ್ಯಾರೆಟ್, ಗುಲ್ಕನ್ ಹೀಗೆ ಹಲವು ಹೊಸ ತರಹದ ಹೋಳಿಗೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಇನ್ನು ಬರೀ ಸಿಹಿ ಹೋಳಿಗೆಯಷ್ಟೇ ಅಲ್ಲ, ಖಾರ ಹೋಳಿಗೆಗಳೂ ಇವೆ. ಮುಂದಿನ ದಿನಗಳಲ್ಲಿ ಮಾವು, ಹಲಸು ಮುಂತಾದ ಹಣ್ಣುಗಳಿಂದ ಮಾಡಿದ ಹೋಳಿಗೆಗಳನ್ನು ಕೊಡುವ ಯೋಚನೆ ಮಾಡುತ್ತಿದ್ದಾರೆ ಭಾಸ್ಕರ್.
ಇನ್ನು ಕುರುಕ್ ತಿಂಡಿಗಳಲ್ಲಿ ಏನು ಸಿಗುತ್ತದೆ ಎಂದು ಹೇಳುವುದು ಕಷ್ಟ. ಚಕ್ಲಿ, ಕೋಡುಬಳೆ, ಚಿಪುÕ, ಮಿಕ್ಸ$cರ್, ಮುರುಕು, ಖಾರ ಸೇವ್, ನಿಪ್ಪಟ್ಟು, ತೇಂಗೊಳಲು, ಖಾರ ಬೂಂದಿ, ಬೆಣ್ಣೆ ಮುರುಕು, ಶಂಕರಪೊಳಿ ಜೊತೆಗೆ ಕಾಂಗ್ರೆಸ್ ಕಡಲೆ, ಚಿಂತಾಮಣಿ ಕಡಲೆ, ಹೆಸರುಬೇಳೆ, ಅವರೇಬೇಳೆ, ಬಟಾಣಿ ಹೀಗೆ ಎಲ್ಲವೂ ಸಿಗುತ್ತದೆ. ಸಿಹಿಯ ವಿಚಾರಕ್ಕೆ ಬಂದರೆ ಪೆಪ್ಪರುಮೆಂಟುಗಳು, ಕಡಲೆ ಮಿಠಾಯಿಗಳ ಜೊತೆಗೆ ರವೆ ಉಂಡೆ, ಕಡುಬು, ಸಜ್ಜಪ್ಪ, ಬೇಸನ್ ಲಾಡು, ಪುರಿ ಉಂಡೆ, ಸಕ್ಕರೆ ಅಚ್ಚುಗಳು ಸಾಕಷ್ಟು ಜನಪ್ರಿಯ. ಇದರ ಜೊತೆಗೆ 15 ವಿವಿಧ ರೀತಿಯ ಉಪ್ಪಿನಕಾಯಿಗಳು, ಸಾರು ಪುಡಿ, ಹುಳಿ ಪುಡಿ, ಪುಳಯೋಗರೆ ಗೊಜ್ಜು, ತೊಕ್ಕು ಎಲ್ಲವೂ ಸಿಗುತ್ತದೆ. ಇವೆಲ್ಲಾ ಸ್ಯಾಂಪಲ್ ಅಷ್ಟೇ.
ಈ ಪೈಕಿ ಹೋಳಿಗೆಗಳನ್ನು ನೇರವಾಗಿ ಅಲ್ಲೇ ಮಾಡಿ ಕೊಡಲಾಗುತ್ತದೆ. ಕೆಲವರು ಅಲ್ಲೇ ನಿಂತು ಬಿಸಿಬಿಸಿ ತಿಂದರೆ, ಇನ್ನೂ ಕೆಲವರು ಮನೆಗೆ ಕಟ್ಟಿಸಿಕೊಂಡು ಹೋಗುತ್ತಾರೆ. ಇನ್ನು ಕುರುಕ್ ತಿಂಡಿಯ ವಿಚಾರಕ್ಕೆ ಬಂದರೆ, ಅದನ್ನು ಶಾಸ್ತ್ರಿ ನಗರದ ಫ್ಯಾಕ್ಟರಿಯಲ್ಲಿ ಮಾಡಿ, ಅಂಗಡಿಗೆ ತಂದು ಮಾರಲಾಗುತ್ತದೆ. ಇವೆಲ್ಲಾ ಮಾಡುವುದಕ್ಕೆ ಸುಮಾರು 15 ಜನರ ತಂಡವಿದೆ.
ಎಲ್ಲಾ ಸರಿ, ಮೂರೂ ಅಂಗಡಿಗಳೂ ಬೆಂಗಳೂರಿನ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಬೇರೆಬೇರೆ ಕಡೆ ಏನಾದರೂ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿಗಳನ್ನು ಪ್ರಾರಂಭಿಸುವ ಯೋಚನೆ ಇದೆಯೇ ಎಂದರೆ ಖಂಡಿತಾ ಇದೆ ಎನ್ನುತ್ತಾರೆ ಭಾಸ್ಕರ್. ಆದರೆ, ಕೆಲಸಗಾರರ ಸಮಸ್ಯೆ ಸೇರಿದಂತೆ ಕೆಲವು ಸಮಸ್ಯೆಗಳಿರುವುದರಿಂದ ಅವರಿನ್ನೂ ಆ ಧೈರ್ಯ ಮಾಡೋಕೆ ಹೋಗಿಲ್ಲ. ಹಾಗಾಗಿ ಮನೆ ಹೋಳಿಗೆ ಮತ್ತು ಕುರುಕ್ ತಿಂಡಿಗಳು ಬೇಕೆಂದರೆ, ಸದ್ಯಕ್ಕೆ ಈ ಮೂರೇ ಅಂಗಡಿಗಳಿಗೆ ಹೋಗಬೇಕು.
– ಭುವನ್