ರಾತ್ರಿ ಎನೋ ಸದ್ದಾದಂತಾಗಿ ಸಿಂಚನಾಳಿಗೆ ಎಚ್ಚರವಾಯಿತು. ಗೋಡೆ ಬಳಿ ಬಂದು ನೋಡಿದರೆ ಅವರು ಬಿಡಿಸಿದ್ದ ಚಿತ್ರ ನಿಜವಾದ ಕಾಡಾಗಿ ಬದಲಾಗಿತ್ತು. ಮೂವರೂ ಕಾಡಿನೊಳಗೆ ಹೊಕ್ಕರು. ಕಾಡಿನ ದೇವತೆ ಪ್ರತ್ಯಕ್ಷಳಾಗಿ “ನೀವು ಪರಿಸರಪ್ರೇಮಿಗಳಾಗಿದ್ದರಿಂದ ನನಗೆ ನಿಮ್ಮನ್ನು ಕಂಡರೆ ಇಷ್ಟ’ ಎಂದಳು. ಅವರಿಗೆ ಕೈಪಟ್ಟಿಯೊಂದನ್ನು ನೀಡಿ “ಇನ್ನು ಮುಂದೆ ನೀವು ಒಳಗೆ ಬರುವಾಗ ಇದನ್ನು ಕೈಗೆ ಕಟ್ಟಿಕೊಂಡು ಬನ್ನಿ. ಆಗ ಕಾಡಿನಲ್ಲಿ ನಿಮಗೆ ಯಾವುದೇ ತರಹದ ಅಪಾಯ ಆಗುವುದಿಲ್ಲ’ ಎಂದು ಭರವಸೆ ಕೊಟ್ಟಳು.
ಸಿಂಚನಾ ಒಬ್ಬಳು ಪುಟ್ಟ ಹುಡುಗಿ. ತುಂಬಾ ಜಾಣೆ. ತಿಳಿಸಿ ಹೇಳಿದರೆ ಅರ್ಥ ಮಾಡಿಕೊಳ್ಳುವ ಸ್ವಭಾವ. ಅವಳಿಗೆ ಮರಗಿಡಗಳು , ಪ್ರಾಣಿ ಪಕ್ಷಿಗಳೆಂದರೆ ಪಂಚಪ್ರಾಣ. ಅವರ ಮನೆಯಲ್ಲಿ ಇದ್ದ ಇಣಚಿ ರಾಮು ಹಾಗೂ ನಾಯಿ ಸೋಮು ಅವಳ ಸಂಗಾತಿಗಳಾಗಿದ್ದರು. ಉಳಿದ ಮಕ್ಕಳಂತೆ ಟಿ.ವಿ, ಮೊಬೈಲ್ ಜತೆ ಕಾಲವನ್ನು ಹಾಳು ಮಾಡುತ್ತಿರಲಿಲ್ಲ. ಅವಳ ಸ್ನೇಹಿತೆಯರೆಲ್ಲಾ ಕಾರ್ಟೂನ್ ನೋಡುತ್ತಿದ್ದರೆ, ಇವಳು ಮಾತ್ರ ಹೂವಿನ ಗಿಡ, ತರಕಾರಿ ಗಿಡಗಳನ್ನು ಬೆಳೆಸುವುದು, ಪ್ರಾಣಿಪಕ್ಷಿಗಳಿಗೆ ನೀರು ಕೊಡುವುದು ಮುಂತಾದ ಕೆಲಸಗಳಲ್ಲಿ ತೊಡಗುತ್ತಿದ್ದಳು.
ಶಾಲೆ ರಜಾ ಬಂತೆಂದರೆ ಪರಿಸರದ ಮಧ್ಯದಲ್ಲೇ ಕಾಲ ಕಳೆಯುತಿದ್ದಳು. ದಿನ ಬೆಳಿಗ್ಗೆ ಎದ್ದು ಮುಖ ತೊಳೆದು ದೇವರಿಗೆ ಕೈಮುಗಿದು, ದೇವರ ಪೂಜೆಗೆ ಹೂಗಳನ್ನು ಕೊಯ್ದ ನಂತರವೇ ತಿಂಡಿ ತಿನ್ನುತ್ತಿದ್ದಳು. ಕಿಟ್ಟಿ ಪಕ್ಕದ ಮನೆಯ ಹುಡುಗ. ಆಗಾಗ ಸಿಂಚನಾಳ ಮನೆಗೆ ಆಡೋಕೆ ಬರುತಿದ್ದ. ಇಬ್ಬರೂ ಸೇರಿ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸುತ್ತಿದ್ದರು, ಕಣ್ಣಾಮುಚ್ಚಾಲೆ, ಕುಂಟಾಟ ಆಟಗಳನ್ನು ಆಡುತಿದ್ದರು. ಒಂದು ದಿನ ಸಿಂಚನಾ ಹಾಗೂ ಕಿಟ್ಟಿಯ ನಡುವೆ ಜಗಳವಾಯಿತು. ಕಿಟ್ಟಿ ಸಿಟ್ಟಿನಿಂದ ಅವಳ ಮನೆಯಿಂದ ಹೋಗುವಾಗ ಅವಳು ಬೆಳೆಸಿದ್ದ ಗಿಡಗಳನ್ನು ಕಿತ್ತುಹಾಕಿದ. ಇದರಿಂದ ಸಿಂಚನಾಳಿಗೆ ತುಂಬಾ ದುಃಖವಾಯಿತು.
ರಾಮು, ಸೋಮು ಕೂಡ ಬೇಸರಿಸಿಕೊಂಡು ಸಿಂಚನಾಳ ಜೊತೆ ಮಂಕಾಗಿ ಕುಳಿತಿದ್ದವು. ಕೆಲ ಸಮಯದ ನಂತರ ರಾಮು ಸೋಮು ಇಬ್ಬರೂ ಸಿಂಚನಾಳನ್ನು ಖುಷಿಪಡಿಸಲು ಉಪಾಯವನ್ನು ಯೋಚಿಸತೊಡಗಿದರು. ರಾಮು ಅವಳ ಕೈ ಎಳೆಯತೊಡಗಿದ, ಸೋಮು ಅವಳ ಅಂಗಿಯನ್ನು ಎಳೆಯತೊಡಗಿದ. ಅವಳಿಗೆ ಏನೂ ತೋಚಲಿಲ್ಲ. ಆಮೇಲೆ ರಾಮು ಸೋಮು ಕಾಲಿಗೆ ಬಣ್ಣ ಮೆತ್ತಿಕೊಂಡು ಗೋಡೆಗೆ ಬಳಿಯ ಹತ್ತಿದರು. ಆಗ ಸಿಂಚನಾಳಿಗೆ ಗೋಡೆಯ ಮೇಲೆ ಚಿತ್ರಬಿಡಿಸುವ ಅವನ ಪ್ರಯತ್ನದ ಬಗ್ಗೆ ಗೊತ್ತಾಯಿತು. ಮೂವರೂ ಸೇರಿ ಮರ ಗಿಡ ಪಕ್ಷಿಪ್ರಾಣಿಗಳ ಚಿತ್ರವನ್ನು ಗೋಡೆ ತುಂಬ ಬಿಡಿಸಿದರು.
ರಾಮು- ಸೋಮು ಸಿಂಚನಾಳ ಜೊತೆ ಅವಳ ಕೋಣೆಯಲ್ಲೇ ಮಲಗುತ್ತಿದ್ದರು. ಆ ದಿನ ರಾತ್ರಿ ಎನೋ ಸದ್ದಾದಂತಾಗಿ ಮೂವರಿಗೂ ಎಚ್ಚರವಾಯಿತು. ಗೋಡೆ ಬಳಿ ಬಂದು ನೋಡಿದರೆ ಅವರು ಬಿಡಿಸಿದ್ದ ಚಿತ್ರ ನಿಜವಾದ ಕಾಡಾಗಿ ಬದಲಾಗಿತ್ತು. ಮೂವರೂ ಕಾಡಿನೊಳಗೆ ಹೊಕ್ಕರು. ಅವರಿಗೆ ಕಾಡಿನ ದೇವತೆ ಪ್ರತ್ಯಕ್ಷಳಾಗಿ “ನೀವು ಪರಿಸರಪ್ರೇಮಿಗಳಾಗಿದ್ದರಿಂದ ನನಗೆ ನಿಮ್ಮನ್ನು ಕಂಡರೆ ಇಷ್ಟ’ ಎಂದಳು. ಅವರಿಗೆ ಕೈಪಟ್ಟಿಯೊಂದನ್ನು ನೀಡಿ “ಇನ್ನುಮುಂದೆ ನೀವು ಒಳಗೆ ಬರುವಾಗ ಇದನ್ನು ಕೈಗೆ ಕಟ್ಟಿಕೊಂಡು ಬನ್ನಿ. ಆಗ ಕಾಡಿನಲ್ಲಿ ನಿಮಗೆ ಯಾವುದೇ ತರಹದ ಅಪಾಯ ಆಗುವುದಿಲ್ಲ’ ಎಂದು ಭರವಸೆ ಕೊಟ್ಟಳು. ಆವತ್ತಿನಿಂದ ಸಿಂಚನಾ ಕಾಡಿಗೆ ಹೋಗಿ ಅಪರೂಪದ ಬಣ್ಣ ಬಣ್ಣದ ಗಿಡಗಳು, ಹಣ್ಣುಗಳನ್ನೆಲ್ಲಾ ತಂದು ಮನೆ ಮುಂದೆ ನೆಡಲು ಶುರುಮಾಡಿದಳು. ಅಲ್ಲದೆ ಪರಿಚಿತರಿಗೂ ಕೊಟ್ಟಳು.
ಕಿಟ್ಟಿಗೆ ಸಿಂಚನಾಳ ವರ್ತನೆ ಕಂಡು ಅನುಮಾನ ಬಂದಿತು. ಅನುಮಾನ ಪರಿಹರಿಸಿಕೊಳ್ಳಲು ಸಿಂಚನಾಳ ಮೇಲೆ ಒಂದು ಕಣ್ಣಿಟ್ಟ. ಒಂದು ದಿನ ರಾತ್ರಿ ಸಿಂಚನಾ ಗೋಡೆ ಮೇಲೆ ಬರೆದ ಚಿತ್ರ ಕಾಡಾಗಿ ಬದಲಾಗುವುದನ್ನೂ, ಅದರೊಳಗೆ ಸಿಂಚನಾ ಹೋಗುವುದನ್ನೂ ಕಿಟ್ಟಿ ನೋಡಿದ. ಮಾರನೇ ದಿನ ಸಿಂಚನಾ ಗೋಡೆಯ ಮಾಯಾ ಕಾಡಿನೊಳಗೆ ಹೋಗುವುದನ್ನೇ ಕಾದು ಕುಳಿತ ಕಿಟ್ಟಿ ತಾನೂ ಅವಳನ್ನು ಹಿಂಬಾಲಿಸಿದ. ಒಂದಷ್ಟು ದೂರ ಹೋದ ಮೇಲೆ ಸಿಂಚನಾ ಅವನ ಕಣ್ಣಿನಿಂದ ಮರೆಯಾದಳು. ಕಿಟ್ಟಿ ಕಾಡಿನಲ್ಲಿ ದಾರಿ ತಪ್ಪಿ ಅಲೆಯತೊಡಗಿದ. ಪ್ರಾಣಿಗಳಿಗೆ ಹೆದರಿ ಓಡತೊಡಗಿದ. ಇತ್ತ ಸಿಂಚನಾ ಆ ಕಾಡಿನಿಂದ ಮರಳಿ ಬಂದಳು.
ಮರುದಿನ ಅವಳಿಗೆ ಕಿಟ್ಟಿ ಕಾಣೆಯಾಗಿರುವ ಸುದ್ದಿ ಕಿವಿಗೆ ಬಿತ್ತು. ತನ್ನ ಗೆಳೆಯ ಕಳೆದುಹೊಗಿದ್ದಾನೆ ಎಂದು ಕೇಳಿ ಬೇಸರವಾಯಿತು. ಅಷ್ಟರಲ್ಲಿ ಗೋಡೆಯ ಬಳಿ ಕಿಟ್ಟಿಯ ವಾಚ್ ಸಿಕ್ಕಿತು. ಆಗ ಅವಳಿಗೆ ಕಿಟ್ಟಿ ಗೋಡೆಯೊಳಗೆ ಸಿಕ್ಕಿಕೊಂಡಿರಬಹುದು ಎಂಬ ಅನುಮಾನ ಬಂದಿತು. ರಾತ್ರಿ ಗೋಡೆ ಮೇಲೆ ಚಿತ್ರ ಬರೆದು ಮಾಯಾ ಕಾಡಿನೊಳಗೆ ಹೊಕ್ಕಳು. “ಕಿಟ್ಟಿ… ಕಿಟ್ಟಿ… ಎಲ್ಲಿದ್ದೀಯಾ?’ ಎಂದು ಕೂಗುತ್ತಾ ಹೊರಟಳು. ಕಿಟ್ಟಿ ಭಯದಿಂದ ಮರ ಹತ್ತಿ ಕುಳಿತಿದ್ದ. ಅವನಿಗೆ ಸಿಂಚನಾಳ ದನಿ ಕೇಳಿತು. ಮೇಲಿಂದಲೇ ಸಿಂಚನಾಳ ಕೂಗು ಹಾಕಿದ. ಸಿಂಚನಾಳನ್ನು ನೋಡುತ್ತಿದ್ದಂತೆಯೇ ಕಿಟ್ಟಿ ಮರದಿಂದ ಚಂಗನೆ ಹಾರಿ ಕೆಳಕ್ಕಿಳಿದ. ಇಬ್ಬರೂ ಅಲ್ಲಿಂದ ಸುರಕ್ಷಿತವಾಗಿ ವಾಪಸ್ಸಾದರು. ಕಿಟ್ಟಿ ತಾನು ಗಿಡಗಳನ್ನು ಕಿತ್ತು ಹಾಕಿದ್ದಕ್ಕೆ ಸಿಂಚನಾಳ ಕ್ಷಮೆ ಕೇಳಿದ. ಇಬ್ಬರೂ ಮತ್ತೆ ಸ್ನೇಹಿತರಾದರು. ಇಬ್ಬರೂ ಗಿಡಗಳನ್ನು ಇತರರಿಗೆ ಹಂಚುವ ಕೆಲಸದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡತೊಡಗಿದರು.
– ನಿತಿಶ್ರೀ