Advertisement

Trekking: ಮಲೆನಾಡ ನಾಶಕ್ಕೆ ಕಾರಣವಾಗದಿರಲಿ ಚಾರಣ

03:09 PM Jul 15, 2024 | Team Udayavani |

ಮುಗಿಲೆತ್ತರಕ್ಕೆ ಆಕಾಶಕ್ಕೆ ಏಣಿ ಇಟ್ಟಂತಿರುವ ಸಹ್ಯಾದ್ರಿಯ ಹಸುರು ಪರ್ವತ ಶ್ರೇಣಿ, ಕಣ್ಣ ಹಾಯಿಸಿದಲೆಲ್ಲ ವಿಸ್ತಾರವಾಗಿ ಬೆಳೆದಿರುವ ಅಡವಿ, ಆಕಾಶವೇ ಭುವಿಗೆ ಬಂದು ಮುತ್ತಿಡುವಂತೆ ಭಾಸವಾಗುವಂತೆ ಮಾಡುವ ಇಬ್ಬನಿಗಳ ಹಿಂಡು, ಮಂಜಿನ ಜತೆ ಸಂಯುಕ್ತವಾಗಿ ತಣ್ಣನೆಯ ಇಂಪಾದ ಅನುಭವ ನೀಡುವ ಗಾಳಿ. ಇಂತಹ ನೆಮ್ಮದಿಯ ನಿರ್ಮಲ ವಾತಾವರಣ ನೀಡುವ ಭೂಲೋಕದ ಸ್ವರ್ಗದಂತಹ ಪ್ರದೇಶವೇ ನಮ್ಮ ಮಲೆನಾಡು. ಆದರೆ ನಮ್ಮಿಂದಲೇ ಈ ಭೂಲೋಕದ ಸ್ವರ್ಗ ಕೂಡ ನರಕವಾಗುತ್ತಿದೆ ಅಂದರೇ ನಂಬಲು ಸಾಧ್ಯವೇ?

Advertisement

ಹೌದು. ಇಂಥಹದ್ದೊಂದು ಭಯಾನಕ ಹಾಗೂ ದುಃಖಕರ ಬೆಳವಣಿಗೆ ಚಾರಣ ಅನ್ನುವ ಹೆಸರಿನಲ್ಲಿ ನೆಡೆಯುತ್ತಿದೆ. ಮಾನವ ಜೀವಿ ಮೊದಲಿನಿಂದಲೂ ಹಾಗೆಯೇ. ತನ್ನ ಕ್ಷಣಿಕ ಆಸೆ, ಖುಷಿ, ಮೋಜು – ಮಸ್ತಿಗಾಗಿ ಕಗ್ಗೊಲೆ ಮಾಡುತ್ತಾ ಬಂದಿರುವುದು ಪ್ರಕೃತಿ ಮಾತೆಯನ್ನೇ! ಇವಾಗ ಈ ಸರದಿ ಬಂದಿರುವುದು ನೆಮ್ಮದಿಯುತ ಪಶ್ಚಿಮಘಟ್ಟದ ಗಿರಿ ಶಿಖರಗಳಾದ ಕೊಡಚಾದ್ರಿ, ಕೆಮ್ಮಣ್ಣುಗುಂಡಿ ಮತ್ತು ಮುಳ್ಳಯ್ಯನಗಿರಿಯಂತಹ ಪರ್ವತ ಶ್ರೇಣಿಗಳಿಗೆ!

ಹಿಂದೆಲ್ಲ ಚಾರಣ ಅಂದ ಕೂಡಲೇ ನೆನಪಾಗುತ್ತಿದ್ದಿದ್ದು ಟ್ರೇಕ್ಕಿಂಗ್‌ ಬ್ಯಾಗ್‌ ಅಲ್ಲಿ ಒಂದಿಷ್ಟು ತಿಂಡಿ ತಿನಿಸು, ಅಗತ್ಯವಿದಷ್ಟು ನೀರು ತುಂಬಿಸಿಕೊಂಡು ಆರಂಭಗೊಳ್ಳುವ ಚಾರಣ ಅನಂತರದ ಸುಮಾರು ಕಿಲೋ ಮೀಟರ್‌ಗಳ ನಡಿಗೆ, ಏರುಪೇರಾದ ಮಣ್ಣಿನ ಕಷ್ಟಮಯ ದಾರಿಯಲ್ಲಿ ಸಾಗಿ ಕೊನೆಯಲ್ಲಿ ಶಿಖರದ ತುದಿಯಲ್ಲಿ ನಿಂತು ಶುದ್ಧ ಗಾಳಿ ತೆಗೆದುಕೊಂಡಾಗ ಚಾರಣ ಮಾಡಿರುವುದಕ್ಕೂ ಒಂದು ಸಾರ್ಥಕ ಭಾವನೆ ಮೂಡುತಿತ್ತು.

Advertisement

ಇವಾಗ ಪರಿಸ್ಥಿತಿ ಹಾಗಿಲ್ಲ. ತಂತ್ರಜ್ಞಾನ ಬೆಳೆದಂತೆ ಮಾನವ ತನ್ನ ಶೋಕಿಗಾಗಿ ವಾರಂತ್ಯದ ಮೋಜು ಮಸ್ತಿಗಾಗಿ ಹುಡುಕಿಕೊಂಡ ದಾರಿಯಾಗಿದೆ ಚಾರಣ. ಹಸುರುಮಯ ಬೆಟ್ಟವನ್ನೇ ನುಣ್ಣಗೆ ಕೆತ್ತಿ ಅಲ್ಲಲ್ಲಿ ನಾಯಿಕೊಡೆಗಳಂತೆ ಹಬ್ಬಿಕೊಂಡಿರುವ ಹೋಮ್‌ ಸ್ಟೇ ಮತ್ತು ರೆಸಾರ್ಟ್‌ಗಳೇ ಈ ಶೋಕಿದಾರರಿಗೆ ಆಹ್ವಾನಿಕರು. ಅಭಿವೃದ್ಧಿಯ ಹೆಸರಿನಲ್ಲಿ ಶಿಖರದ ತುದಿಯ ತನಕವೂ ಮಾಡಿರುವ ಡಾಮರು, ಕಾಂಕ್ರೀಟ್‌ ರಸ್ತೆಗಳಿಂದ ಎಲ್ಲರೂ ತಮ್ಮ ಸ್ವಂತ ವಾಹನದಲ್ಲೇ ತುಂಬಾ ಸರಳವಾಗಿ ಬೆಟ್ಟವನ್ನು ಕೂತಲ್ಲೇ ಹತ್ತಿ ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇದರಿಂದ ಚಾರಣದ ಮೂಲ ಉದ್ದೇಶಕ್ಕೆ ಧಕ್ಕೆ ಬಂದಿರುವುದರ ಜತೆಗೆ ಮಲೆನಾಡು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಂತು ಸುಳ್ಳಲ್ಲ. ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಅನ್ನುವಂತೆ ಮುಳ್ಳಯ್ಯನಗಿರಿಯಲ್ಲಿ  ನಾಲ್ಕು ಗಂಟೆಗೂ ಹೆಚ್ಚುಕಾಲ ಆಗಿರುವ ಟ್ರಾಫಿಕ್‌ ಜಾಮ್‌ ಜತೆಗೆ ಸರಕಾರ ಎಲ್ಲ ಚರಣಾರ್ಥಿಗಳಿಗೆ ನಿರ್ಬಂಧ ಹೇರಿರುವುದು!

ಇನ್ನಾದರೂ ಮಾನವ ಜಾತಿಗಳಾದ ನಾವುಗಳು ಎಚ್ಚೆತ್ತು, ಶೋಕಿಗಾಗಿ ವಾರಂತ್ಯದ ವಾಹನಗಳ ಚಾರಣವನ್ನು ನಿಲ್ಲಿಸಿ ನಮ್ಮ ಮುಂದಿನ ಪೀಳಿಗೆಗೆ ಪಶ್ಚಿಮ ಘಟ್ಟವನ್ನು ಅದರ ವೈಭವಪೂರಿತ ಸೌಂದರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸೋಣ.

-ಪ್ರಸಾದ್‌ ಆಚಾರ್ಯ

ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next