Advertisement

ಮೇ ಸಾಹಿತ್ಯ ಮೇಳಕ್ಕೆ ತೆರೆ

04:01 PM May 08, 2017 | Team Udayavani |

ಧಾರವಾಡ: ಲಡಾಯಿ ಪ್ರಕಾಶನ, ಕವಿ ಪ್ರಕಾಶನ  ಹಾಗೂ ಚಿತ್ತಾರ ಕಲಾ ಬಳಗದ ಸಹಯೋಗದಲ್ಲಿ “ಫ್ಯಾಸಿಸಂ ಚಹರೆಗಳು: ಅಪಾಯ-ಪ್ರತಿರೋಧ’ ವಿಷಯ ಮುಂದಿಟ್ಟುಕೊಂಡು ಎರಡು ದಿನಗಳ ಹಮ್ಮಿಕೊಂಡಿದ್ದ ಮೇ ಸಾಹಿತ್ಯ ಮೇಳಕ್ಕೆ ರವಿವಾರ ಸಂಜೆ ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ತೆರೆಬಿದ್ದಿತು. 

Advertisement

ಈ ಸಮಾರೋಪ ಸಮಾರಂಭದಲ್ಲಿ ತಲಾ 5 ಸಾವಿರ ರೂ.ನಗದು, 20 ಪುಸ್ತಕ ಹಾಗೂ ಪ್ರಮಾಣ ಒಳಗೊಂಡ ಬಂಡ್ರಿ ಸಮಾಜಮುಖೀ ಶ್ರಮಜೀವಿ ಪ್ರಶಸ್ತಿಯನ್ನು ರೈತ ಹೋರಾಟಗಾರ್ತಿ ಬಿ.ಅನಸೂಯಮ್ಮ ಹಾಗೂ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಯುವ ಸಾಹಿತಿ ಮಹಾಂತೇಶ ಪಾಟೀಲರಿಗೆ ಪ್ರದಾನ ಮಾಡಲಾಯಿತು. 

ಪ್ರಶಸ್ತಿ ಸ್ವೀಕರಿಸಿದ ಬಿ.ಅನಸೂಯಮ್ಮ ಮಾತನಾಡಿ, ನಮಗೆ ನಿಜವಾಗಿಯೂ ಸ್ವಾತಂತ್ರಸಿಕ್ಕಿಲ್ಲ. ಸ್ವಾತಂತ್ರದ ಅಸ್ತಿ ಪಂಜರ ಮಾತ್ರ ಸಿಕ್ಕಿದ್ದು, ಇನ್ನೂ ಅದಕ್ಕೆ ಮಾಂಸ, ರಕ್ತ ತುಂಬಬೇಕಿದೆ. ರೈತರು, ಮಹಿಳೆಯರ ಬೇಡಿಕೆಗಳ ಈಡೇರಿಕೆಗಾಗಿ ಜನಪರ ಕಾಳಜಿ ಉಳ್ಳ ಜನರು ಒಂದಾಗಿ ಸಂಘಟಿತ ಹೋರಾಟ ನಡೆಸುವುದು ಅವಶ್ಯಕವಾಗಿದೆ. 

ನಾವು ನಿರಾಶರಾಗದೇ ಆಶಾವಾದದೊಂದಿಗೆ ಚಳವಳಿಯನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು. ಜಾಗತೀಕರಣದಿಂದಾಗಿ ಹಳ್ಳಿ ಶಾಲೆಗಳು ಮುಚ್ಚುತ್ತಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಆಳುವ ಸರ್ಕಾರಗಳು  ಇದನ್ನು ನಿರ್ಲಕ್ಷಿಸುತ್ತಿವೆ.

ರೈತರ ಸಾಲಮನ್ನಾ ಮಾಡುವುದಕ್ಕಿಂತ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವುದು ಮುಖ್ಯ. ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಸಮಾನ ಮನಸ್ಕರು ಪ್ರಯತ್ನಿಸಬೇಕು ಎಂದರು. ಪ್ರಶಸ್ತಿ ಪುರಸ್ಕೃತ ಮಹಾಂತೇಶ ಪಾಟೀಲ ಮಾತನಾಡಿ, ನನ್ನ ಕವಿತೆಗಳಲ್ಲಿನ ಮನುಷ್ಯತ್ವಕ್ಕೆ ಪ್ರಶಸ್ತಿ ಬಂದಿದೆ ಎಂದೇ ಭಾವಿಸಿದ್ದೇನೆ.

Advertisement

ನನ್ನಿಂದ ನಾನು ಬಿಡುಗಡೆಗೊಳ್ಳುವುದಕ್ಕಾಗಿ ಕವಿತೆಗಳನ್ನು ಬರೆದೆ. ವಾಚಕರಿಗೆ ಅವರ ಸಂಕಟಗಳ ಬಿಡುಗಡೆಗೆ ನನ್ನ ಕಾವ್ಯ ದಾರಿ ತೋರಿದರೆ ಕಾವ್ಯ ರಚನೆ ಸಾರ್ಥಕವಾಯಿತು ಎಂದೇ ಭಾವಿಸುತ್ತೇನೆ ಎಂದು ತಿಳಿಸಿದರು. 

ಶಸ್ತ್ರಾಸ್ತ್ರ ಸಂಗ್ರಹಕ್ಕೆ ಪೈಪೋಟಿ: ಸಮಾರೋಪ ಭಾಷಣ ಮಾಡಿದ ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲ್‌ ಮಾತನಾಡಿ, ದೇಶಗಳ ಮಧ್ಯೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಕೊಳ್ಳಲು ಪೈಪೋಟಿ ನಡೆದಿದೆ. ಪ್ರಸ್ತುತ ಎಲ್ಲ ದೇಶಗಳ ಬಳಿಯಿರುವ ಶಸ್ತ್ರಾಸ್ತ್ರಗಳಿಂದ ವಿಶ್ವವನ್ನು 100 ಬಾರಿ ಧ್ವಂಸ ಮಾಡಬಹುದಾಗಿದೆ.

ಜಗತ್ತಿನಲ್ಲಿ ಕರುಣೆ, ಪ್ರೀತಿ, ಭಾತೃತ್ವಕ್ಕೆ ಬೆಲೆಯಿಲ್ಲವೇ ಎಂಬ ಸಂದೇಹ ಮೂಡುತ್ತದೆ ಎಂದರು. ಎಲ್ಲ ಭಾಷೆಗಳ ಅಂತರ ಪ್ರವಾಹ, ಸಂಸ್ಕೃತಿಗಳ ಅಂತರ ಪ್ರವಾಹ ನಮ್ಮನ್ನು ಜೋಡಿಸಿದೆ. ನಾವು ಸಂಸ್ಕೃತಿ ಬಂಧು, ಭಾಷಾ ಬಂಧು, ದೇಶ ಬಂಧುಗಳು ಎಂಬ ಮನೋಭಾವ ಬೆಳೆಯಬೇಕು ಎಂದರು. 

ಇದೇ ಸಂದರ್ಭದಲ್ಲಿ “ಒಡೆದ ಬಣ್ಣದ ಚಿತ್ರಗಳು’ ಕೃತಿ ಲೋಕಾರ್ಪಣೆ ಮಾಡಲಾಯಿತು. ಚೆನ್ನಪ್ಪ ಅಂಗಡಿ ನಿರೂಪಿಸಿದರು. ನಂತರ ಸಹಮತ μಲಂ ಸೊಸೈಟಿ ಮಂಗಳೂರು ಅವರಿಂದ ವೈಕಂಮಹಮದ್‌ ಬಷೀರ್‌ ಕತೆಯಾಧಾರಿತ, ಸತೀಶ ತಿಪಟೂರು ನಿರ್ದೇಶನದ “ಗೋಡೆಗಳು’ ನಾಟಕ ಪ್ರದರ್ಶನಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next