Advertisement
ಧ್ವನಿ ಅಥವಾ ಶ್ರಾವ್ಯ ಮಾಧ್ಯಮವಾದ ಆಕಾಶವಾಣಿ ಯನ್ನು ರೇಡಿಯೋ ಎಂಬ ಪುಟ್ಟ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಆಲಿಸಿಕೊಂಡು ಬಂದೆವು. ಇಂದಿನ ಮೊಬೈಲ್ ಯುಗದಲ್ಲೂ ಈಗ ಈ ಚರವಾಣಿ ಸಾಧನದಲ್ಲಿ ರೇಡಿಯೋ ಆ್ಯಪ್, ನ್ಯೂಸ್ ಆನ್ ಏರ್, ಆಕಾಶವಾಣಿ ಆ್ಯಪ್ ಮೂಲಕ ರೇಡಿಯೋ ಜಗದಾಂತರ್ಯಾಮಿ.
ಸ್ವಾತಂತ್ರಾéನಂತರ ಭಾರತ ಸರಕಾರವು ದೇಶದ ಎಲ್ಲ ಬಾನುಲಿ ಕೇಂದ್ರಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ “ಆಲ್ ಇಂಡಿಯಾ ರೇಡಿಯೋ’ ಎಂಬುದಾಗಿ ನಾಮಕರಣ ಮಾಡಿತು. 1957ರಿಂದ ಆಕಾಶವಾಣಿ ಎನ್ನುವ ಹೆಸರನ್ನು ಸಾರ್ವತ್ರಿಕಗೊಳಿಸಲಾಯಿತು.
Related Articles
Advertisement
ದೇಶದ ಪಶ್ಚಿಮ ಕರಾವಳಿಯ ದಕ್ಷಿಣ ಕರ್ನಾಟಕದ ತುಳುಜನರ ಜನಸಮುದಾಯದ ಆಶೋತ್ತರ, ಜನಪ್ರತಿ ನಿಧಿಗಳ, ಸಂಘ ಸಂಸ್ಥೆಗಳ ದೀರ್ಘಕಾಲೀನ ಬೇಡಿಕೆಯ ಪರಿಣಾಮವಾಗಿ ಆಕಾಶವಾಣಿ ನಿಲಯವೊಂದು ಈ ಭಾಗದಲ್ಲಿ ಅಸ್ತಿತ್ವಕ್ಕೆ ಬಂದಿತು. ಮಂಗಳೂರಿನ ಕದ್ರಿ ಹಿಲ್ಸ್ ನಲ್ಲಿ ಸ್ಟುಡಿಯೋ ಸೌಲಭ್ಯದೊಂದಿಗೆ ಅಲ್ಪ ಶಕ್ತಿಯ ಮೀಡಿಯಂ ವೇವ್ ಟ್ರಾನ್ಸ್‌ಮಿಟರ್ ಮತ್ತು ವ್ಯಾಪಕ ಪ್ರಸಾರಕ್ಕಾಗಿ ಉಡುಪಿ ತಾಲೂಕಿನ ಬ್ರಹ್ಮಾವರದಲ್ಲಿ 20ಕೆವಿ ಟ್ರಾನ್ಸ್‌ಮಿಟರ್ ಒಳಗೊಂಡ ಮಂಗಳೂರು ಆಕಾಶವಾಣಿ ಕೇಂದ್ರ ಆರಂಭವಾಯಿತು.
ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್ ಗೋಲ್ಡ್ ಮೆಡಲ್ 2022 ಗೌರವ
ಇಲ್ಲಿನ ಪ್ರಮುಖ ಆಡಳಿತ ಭಾಷೆ ಕನ್ನಡವಾದರೂ ಮೂಲತಃ ತುಳುನಾಡಾದ ಇಲ್ಲಿನ ಆಡುನುಡಿ ತುಳು. ಕೊಂಕಣಿ ಭಾಷಿಗರೂ ಅಧಿಕ ಸಂಖ್ಯೆಯಲ್ಲಿದ್ದು ಇತರ ಸ್ಥಳೀಯ ಭಾಷೆಗಳನ್ನಾಡುವವರೂ ಇದ್ದಾರೆ. ಆ ಕಾಲದಲ್ಲಿ ತುಳುವಲ್ಲಿ ಆಧುನಿಕ ಸಾಹಿತ್ಯ ರಚನೆ ಅಲ್ಪ ಪ್ರಮಾಣದಲ್ಲಿತ್ತು. ಅಪಾರವಾದ ಜಾನಪದ ಸಾಹಿತ್ಯವಿತ್ತು. ತುಳುವರದೇ ಆದ ಸಂಗೀತ ವಾದ್ಯಗಳಿದ್ದವು. ಆರೋಗ್ಯ, ಕೃಷಿ, ಬ್ಯಾಂಕಿಂಗ್ ತಜ್ಞರು, ಮೇಧಾವಿಗಳು, ಸಂಶೋಧಕರು, ಕಲಾವಿದರು, ಪತ್ರಕರ್ತರು, ಶಿಕ್ಷಣವೇತ್ತರು, ಸಾಹಿತಿಗಳಿದ್ದರು. ಎಲ್ಲೆಲ್ಲೂ ತುಳು ನಾಟಕ, ಯಕ್ಷಗಾನ ಪ್ರದರ್ಶಿಸಲ್ಪಡುತ್ತಿದ್ದವು. ಇವುಗ ಳಿಗೆಲ್ಲ ಮಂಗಳೂರು ಆಕಾಶವಾಣಿ ಏಕಗವಾಕ್ಷಿಯಂತಾ ಯಿತು. ಈ ಎಲ್ಲ ಕ್ಷೇತ್ರಗಳು ಮತ್ತು ತಜ್ಞರಿಗೆ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು.
ಈ ಹಿನ್ನೆಲೆಯಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಕನ್ನಡ, ತುಳು, ಕೊಂಕಣಿ ಈ ಮೂರೂ ಭಾಷೆಗಳಲ್ಲೂ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಿತು. ಆಧುನಿಕ ತಂತ್ರಜ್ಞಾನ ಅಳವಡಿಕೆಯ ಬಳಿಕ ವಿವಿಧ ಸ್ಥಳೀಯ ವಿಶೇಷ ಕಾರ್ಯಕ್ರಮಗಳ ನೇರ ವೀಕ್ಷಕ ವಿವರಣೆ, ಸಂದರ್ಶನಗಳು, ಮಕ್ಕಳು, ಯುವಜನರು ಸೇರಿದಂತೆ ವಿವಿಧ ವಯೋಮಾ ನದ ಪ್ರತಿಭಾವಿಕಾಸಕ್ಕಾಗಿ ಕಾರ್ಯಕ್ರಮಗಳ ಪ್ರಸಾರಗಳು ಭವ್ಯ ಪರಂಪರೆಯಾಗಿರುವಂತೆಯೇ, ಕೃಷಿರಂಗದಲ್ಲಿ ರೈತರ ಅನುಭವ ಕಥನ, ಸಲಹೆ, ಮಾಹಿತಿಗಳು ಬಲುಮುಖ್ಯವಾದ ಮತ್ತೂಂದು ಅಂಗ. ಚಿಂತನ, ಪ್ರತ್ರೋತ್ತರ, ಫೋನ್ ಇನ್ ಮೂಲಕ ದ್ವಿಮುಖ ಸಂವಹನ ಹೀಗೆ ಜನಮನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಬಂತು ಮಂಗಳೂರು ಆಕಾಶವಾಣಿ.
ಆಧುನಿಕ ಕಾಲಘಟ್ಟದಲ್ಲಿ 1997ರಲ್ಲಿ ಪ್ರಸಾರ ಭಾರತಿ ಅನುಷ್ಠಾನೋತ್ತರದಲ್ಲಿ ಪ್ರಸಾರದ ಅಂಶಗಳಲ್ಲಿ, ಕೇಳುಗರ ಅಭಿರುಚಿಗಳಲ್ಲಿ ಹಲವಾರು ಸ್ಥಿತ್ಯಂತರಗಳಾದರೂ ಮಂಗ ಳೂರು ಆಕಾಶವಾಣಿ ಸಾರ್ವಜನಿಕ ಸೇವಾಪರತೆಯ ತನ್ನ ಧೋರಣೆ, ಶಿಸ್ತು ಮತ್ತು ಗುಣಮಟ್ಟವನ್ನು ಆತ್ಮಸಖನಂತೆ, ಆಪ್ತ ಸಮಾಲೋಚಕನಂತೆಯೂ ಉಳಿಸಿಕೊಂಡು ಬಂದಿದೆ. ಪ್ರಸಾರ ಕೇಂದ್ರಗಳ ಸ್ಥಳೀಯ ಮಹತ್ವವನ್ನು ಉಳಿಸಲು ಬ್ರಹ್ಮಾವರದ ಪ್ರಸರಣ ಕೇಂದ್ರವನ್ನು ತಾಂತ್ರಿಕವಾಗಿ ಪುನಶ್ಚೇ ತನಗೊಳಿಸುವುದು, ಸ್ಥಗಿತಗೊಂಡಿರುವ ಅವಶ್ಯ ಸಿಬಂದಿ ನೇಮಕಾತಿ ಪುನರಾರಂಭಿಸಿ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ಕ್ರಮಗಳನ್ನು ಕೈಗೊಂಡು ಪ್ರಸಾರ ಭಾರತಿಯು ಮಂಗಳೂರು ಆಕಾಶವಾಣಿಯಂತಹ ಸ್ವತಂತ್ರ ಕೇಂದ್ರಗಳ ಶಕ್ತಿಯನ್ನು ಮತ್ತಷ್ಟು ಬಲಪಡಿಸಲಿ ಎಂಬುದು ಸಂಸ್ಥಾಪನ ದಿನದ ಹಾರೈಕೆ.
-ಮುದ್ದು ಮೂಡುಬೆಳ್ಳೆ