ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನರ ಬದುಕು ಅಸ್ತವ್ಯಸ್ತವಾಗಿದೆ. ಅದರಲ್ಲೂ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುತ್ತಿರುವುದು ಆಘಾತ ತಂದಿದೆ. ಇತ್ತ ಮೈಸೂರು ಭಾಗದಲ್ಲಿಯೂ ಮಳೆಯಾಗಿದ್ದು, ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಸುರಿಯುತ್ತಿರುವ ಮಳೆಯಿಂದಾಗಿ ಕಂಗೆಟ್ಟಿರುವ ರೈತಾಪಿ ವರ್ಗ, ಮುಂದೇನು ಎಂದು ಚಿಂತಾಕ್ರಾಂತರಾಗಿ ಕುಳಿತುಕೊಳ್ಳುವಂತಾಗಿದೆ.
ಕರಾವಳಿ ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳಲ್ಲಿ ಭೂಕುಸಿತದಂಥ ಪ್ರಕರಣಗಳು ಕಂಡು ಬರುತ್ತಿದ್ದು, ಸುತ್ತಮುತ್ತಲ ನಿವಾಸಿಗಳು ಮನೆಕುಸಿತದ ಆತಂಕವನ್ನೂ ಎದುರಿಸುತ್ತಿದ್ದಾರೆ. ಅಲ್ಲದೆ, 2015ರಿಂದ ಈಚೆಗೆ ಮಳೆಯಿಂದ ಆಗಿರುವ ಅನಾಹುತಗಳಿಂದಾಗಿ ಜನ ಕಂಗೆಟ್ಟಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ನಡುವೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಪೆರೆನ್ಸ್ ಸಭೆ ಮಾಡಿ ವರದಿ ಪಡೆದುಕೊಂಡು ಪರಿಹಾರವನ್ನು ಘೋಷಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಇದೊಂದು ಅತ್ಯಗತ್ಯ ಕ್ರಮವಾಗಿದ್ದು, ಮಳೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವಾಗಿದೆ.
ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಿಗೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸಿಎಂ ಅವರ ಪ್ರಕಾರವೇ ಜೂ.1ರಿಂದ ಇಲ್ಲಿವರೆಗೆ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ. 62 ಜಾನುವಾರುಗಳೂ ಮೃತಪಟ್ಟಿವೆ. ಹೀಗಾಗಿ, ಆದಷ್ಟು ಬೇಗ ಮೃತರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡಬೇಕಾಗಿದೆ. ಇದರ ಜತೆಗೆ, ಮೃತಪಟ್ಟ ಜಾನುವಾರುಗಳ ಮಾಲೀಕರಿಗೂ ಪರಿಹಾರ ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಹಾಗೆಯೇ ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯೂ ಆಗಿದ್ದು, ಪರಿಹಾರ ರೂಪದಲ್ಲಿ ರೈತರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡಬೇಕಾಗಿದೆ.
ರಾಜ್ಯ ಸರ್ಕಾರದ ಕಡೆಯಿಂದ ಈಗ ಪರಿಹಾರದ ಕೆಲಸವೇನೋ ಆಗಿದೆ. ಉಳಿದಿರುವ ಕೆಲಸ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳದ್ದು. ಮಳೆ ಪರಿಹಾರ ಬಿಡುಗಡೆ ಅಥವಾ ನಿರಾಶ್ರಿತರನ್ನು ಕಾಳಜಿ ಕೇಂದ್ರಕ್ಕೆ ರವಾನಿಸುವ ಕೆಲಸ, ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಮತ್ತು ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಸಹಾಯ ಪಡೆದುಕೊಂಡು ಅತ್ಯಂತ ತ್ವರಿತಗತಿಯಲ್ಲಿ ಕೆಲಸ ಮಾಡಬೇಕಾಗಿದೆ.
ಪ್ರವಾಹದ ಸಂದರ್ಭದಲ್ಲಿ ಕೆಲವೊಮ್ಮೆ ಸುತ್ತ ನೀರಿದ್ದರೂ, ಕುಡಿಯಲು ನೀರು, ಆಹಾರ ಸಿಗದಿರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂಥ ವ್ಯವಸ್ಥೆಯನ್ನೂ ಅಧಿಕಾರಿಗಳು ಮಾಡಬೇಕಾಗಿದೆ. ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕಾದದ್ದು ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು. ಈ ಕೂಡಲೇ ಸ್ಥಳೀಯ ಮಟ್ಟದಲ್ಲಿ ಶಾಸಕರು ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ.
ಭೂಕುಸಿತ, ರಸ್ತೆ ಹಾನಿ ಸೇರಿದಂತೆ ಇತರೆ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿಗಾಗಿ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋಶ್ ರಚಿಸಲು ಮುಂದಾಗಿರುವುದು ಉತ್ತಮ. ಗ್ರಾಮದಿಂದ ಬೆಂಗಳೂರಿನ ವರೆಗೂ ಈ ಹಂತದಲ್ಲಿ ಎಲ್ಲರೂ ಪ್ರವಾಹ ಸಂದರ್ಭದಲ್ಲಿ ಸಮರೋಪಾದಿಯಾಗಿ ಕೆಲಸ ಮಾಡಬೇಕಾಗಿದೆ.