ಬೆಂಗಳೂರು: ಬಿಜೆಪಿ ಸರ್ಕಾರ ತರುವಲ್ಲಿ ನಾನೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ತ್ಯಾಗಕ್ಕೆ ಬೆಲೆ ಸಿಗಲಿ, ನನಗೂ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ನನಗೆ ಆಗಿರುವ ಅನ್ಯಾಯ ತೋಡಿಕೊಂಡೆ. ಮೊನ್ನೆ ಮಂತ್ರಿ ಮಂಡಲ ರಚನೆ ಆಗುವಾಗಲೂ ಭೇಟಿ ಮಾಡಿ ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ಮನವಿ ಮಾಡಿದ್ದೆ. ಇನ್ನೂ ನಾಲ್ಕು ಸ್ಥಾನ ಇವೆ, ಮುಂದೆ ವರಿಷ್ಠರ ಗಮನಕ್ಕೆ ತಂದು ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ ಎಂದರು.
ನಾನು ಕೂಡ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡುತ್ತೇನೆ. ನಾನು ತ್ಯಾಗ ಮಾಡಿ ಬಂದಿದ್ದೇನೆ, ನನಗೆ ನ್ಯಾಯ ಕೊಡಲೇಬೇಕು ಎಂದು ನನ್ನ ನಿಲುವು ತಿಳಿಸಿದ್ದೇನೆ. ನಾನೇನು ಸನ್ಯಾಸಿ ಅಲ್ಲ. ಅವತ್ತು ಸರ್ಕಾರ ತರಲಿಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅವತ್ತು ನಾನು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಇವತ್ತು ನನಗೆ ಹೀಗೆ ಆಗಿದೆ. ಹೀಗಾಗಿ ಆದಷ್ಟು ಬೇಗ ನನಗೆ ಸಚಿವನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ವರ್ಕ್ ಫ್ರಂ ಹೋಂ ನೌಕರರ ವೇತನಕ್ಕೆ ಗೂಗಲ್ ಕತ್ತರಿ?
ವಲಸಿಗರಲ್ಲಿ ಒಗ್ಗಟ್ಟಿಲ್ಲದಿರುವುದೇ ತಮ್ಮನ್ನು ಕೈ ಬಿಡಲು ಕಾರಣವಾಯಿತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಒಗ್ಗಟ್ಟು ಇದೆಯೋ ಇಲ್ವೋ ಎಂಬ ಪ್ರಶ್ನೆ ಬೇಡ. ನಾನಂತೂ ಯಾರ ಪರ ವಿರುದ್ದವೂ ಮಾತನಾಡುವುದಿಲ್ಲ. ಆದರೆ ನನ್ನ ತ್ಯಾಗಕ್ಕೆ ಬೆಲೆ ಸಿಗಲಿ ಎಂದು ನಾನು ಕೇಳ್ತಿದ್ದೇನೆ ಎಂದು ಹೇಳಿದರು.