ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತ ಆಟಗಾರ ನೀರಜ್ ಚೋಪ್ರಾ, ಐತಿಹಾಸಿಕ ಸಾಧನೆ ಮಾಡಿದ್ದು, ಬಂಗಾರದ ಪದಕ ಗೆದ್ದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲೇ ಭಾರತದ ಯಾವೊಬ್ಬ ಕ್ರೀಡಾಳು ಕೂಡ ಇಂಥ ಸಾಧನೆ ಮಾಡಿರಲಿಲ್ಲ. ಹೀಗಾಗಿ, ನೀರಜ್ ಚೋಪ್ರಾ ಅವರ ಈ ಸಾಧನೆ ಬಗ್ಗೆ ಇಡೀ ದೇಶವೇ ಕೊಂಡಾಡಬೇಕಾಗಿದೆ. ಅಲ್ಲದೆ, ಸೋಮವಾರ ಬೆಳಗ್ಗೆಯಿಂದಲೂ ನೀರಜ್ ಜೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಮಂಗಳವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇಂಥ ಹೊತ್ತಿನಲ್ಲೇ ನೀರಜ್ ಚೋಪ್ರಾ ಅವರ ಬಂಗಾರ, ಚೆಸ್ ತಾರೆ ಪ್ರಜ್ಞಾನಂದ ಬೆಳ್ಳಿ, ಬ್ಯಾಡ್ಮಿಂಟನ್ ತಾರೆ ಪ್ರಣಯ್ ಕಂಚಿನ ಪದಕ ಗೆದ್ದಿರುವುದು ಒಂದು ರೀತಿಯಲ್ಲಿ ಈ ದಿನಕ್ಕೆ ಇನ್ನಷ್ಟು ಮೆರಗು ತಂದಂತಾಗಿದೆ. ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೇ ಎಂಬ ಮಾತುಗಳ ನಡುವೆಯೇ ಈ ರೀತಿಯ ಸಾಧನೆಗಳು ದೇಶವಾಸಿಗಳು ಮತ್ತು ಕ್ರೀಡಾಸಕ್ತರಲ್ಲಿ ಭವಿತವ್ಯದಲ್ಲಿ ಇನ್ನಷ್ಟು ಪದಕ ಗೆಲ್ಲಬಹುದು ಎಂಬ ಆಶಾಭಾವನೆ ಮೂಡಲು ಕಾರಣವಾಗಿವೆ.
ಕೇವಲ ನೀರಜ್ ಚೋಪ್ರಾ ಅವರಷ್ಟೇ ಅಲ್ಲ, 4*400 ರಿಲೇಯಲ್ಲಿ ಭಾರತದ ತಂಡ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ, ಸೆಮಿಫೈನಲ್ ಹಾದಿಯಲ್ಲಿ ಇವರು ಏಷ್ಯನ್ ದಾಖಲೆ ಮಾಡಿದ್ದು, ಇದು ಕಡಿಮೆ ಸಾಧನೆಯೇನಲ್ಲ. ಇನ್ನು ಸ್ಟಿಪಲ್‌ಚೇಸ್ 3000 ಮೀ.ನಲ್ಲಿ ಪಾರೂಲ್ ಚೌಧರಿ ರಾಷ್ಟ್ರೀಯ ದಾಖಲೆ ಪಡೆದಿದ್ದು, ಜತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದಿದ್ದಾರೆ. ಇವರಿಬ್ಬರ ಸಾಧನೆ ಬಗ್ಗೆಯೂ ಈ ಕ್ಷಣದಲ್ಲಿ ಅಭಿನಂದನೆ ಸಲ್ಲಿಸಲೇಬೇಕು. ಏಕೆಂದರೆ, ಇದುವರೆಗೆ ಈ ವಿಭಾಗಗಳಲ್ಲಿ ಭಾರತ ಫೈನಲ್‌ವರೆಗೆ ಹೋಗಿದ್ದೇ ಇಲ್ಲ.
ಇತ್ತೀಚೆಗಷ್ಟೆ ಸ್ಯಾಫ್ನಲ್ಲಿ ಭಾರತದ ಫುಟ್ಬಾಲ್ ತಂಡ ಪ್ರಶಸ್ತಿ ಗೆದ್ದಿದ್ದು, ಚೆಸ್ ವಿಶ್ವಕಪ್‌ನಲ್ಲಿ ಭಾರತದ ಬಾಲಕರ ಅಪ್ರತಿಮ ಪರಾಕ್ರಮಗಳು, ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರ ಸಾಧನೆಗಳು, ಟೆಸ್, ಟೆಬಲ್ ಟೆನ್ನಿಸ್, ಕುಸ್ತಿ, ಕಬಡ್ಡಿ, ಬಾಕ್ಸಿಂಗ್, ಬಿಲ್ಲುಗಾರಿಕೆ, ಹಾಕಿ, ಟೆನ್ನಿಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಯನ್ನೇ ಮಾಡುತ್ತಾ ಬಂದಿದೆ. ಇಲ್ಲಿ ಒಂದು ವಿಶೇಷವೂ ಇದೆ. ಮೊದಲೆಲ್ಲ ಭಾರತವನ್ನು ಕೇವಲ ಕ್ರಿಕೆಟ್‌ನಿಂದ ಗುರುತಿಸುತ್ತಿದ್ದ ಹೊತ್ತಿನಲ್ಲೇ, ಭಾರತದ ಕ್ರೀಡಾಗಳು, ಅಥ್ಲೀಟ್‌ಗಳು ಪದಕ ಸಾಧನೆ ಮಾಡುತ್ತಿರುವುದು ಹೊಸ ಇತಿಹಾಸ ಬರೆಯುವ ಎಲ್ಲ ಸಾಧ್ಯತೆಗಳನ್ನು ಗಟ್ಟಿಗೊಳಿಸಿವೆ.
ಭಾರತದಲ್ಲಿ ಅವಕಾಶ ಸಿಕ್ಕರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಮಾತುಗಳಿವೆ. ಇದಕ್ಕೆ ಕಾರಣ, ನಮ್ಮ ಜನರಲ್ಲಿರುವ ಪ್ರತಿಭೆ. ಆದರೆ, ಎಷ್ಟೋ ಬಾರಿ, ಅವಕಾಶಗಳು ಸಿಗದೆ ಬಹಳಷ್ಟು ಮಂದಿ ಅಲ್ಲೇ ಮುದುಡಿ ಹೋಗುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳು ಪ್ರತಿಭೆಗಳನ್ನು ಹುಡುಕುವ ಮತ್ತು ಅವರ ಸಾಧನೆಗೆ ನೀರೆರೆಯುವ ಕೆಲಸವನ್ನು ಮಾಡಬೇಕಾಗಿದೆ.
ಜಿಲ್ಲೆಗೆ, ತಾಲೂಕಿಗೆ ಮತ್ತು ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಕ್ರೀಡಾಂಗಣಗಳು, ಆಗಾಗ್ಗೆ ಅಂತರ್ ಶಾಲೆ, ಅಂತರ್ ವಿವಿ, ಅಂತರ ಕಾಲೇಜು ಕ್ರೀಡಾಕೂಟಗಳನ್ನು ಆಯೋಜನೆ ಮಾಡಬೇಕು. ಇದರಲ್ಲಿ ಕಂಡು ಬರುವ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಇವರಿಗೆ ಹೆಚ್ಚಿನ ತರಬೇತಿ ಕೊಡಿಸುವ ಕೆಲಸವನ್ನು ಮಾಡಬೇಕು.
ಒಂದು ವೇಳೆ, ಉತ್ತಮ ಮೂಲಸೌಕರ್ಯ, ತರಬೇತಿ, ಪರಿಕರಗಳನ್ನು ನೀಡಿದರೆ, ಭಾರತವೂ ಜಾಗತಿಕ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲಿದೆ. ಇದರ ಜತೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಡೇ ಪಕ್ಷ 100 ಪದಕಗಳನ್ನು ನಿರೀಕ್ಷೆ ಮಾಡಬಹುದಾಗಿದೆ.