Advertisement

ನಿಷ್ಪಕ್ಷಪಾತ, ಪ್ರಾಮಾಣಿಕತೆ, ಪಾರದರ್ಶಕತೆ ಇರಲಿ

04:17 PM Dec 08, 2018 | Team Udayavani |

ದಾವಣಗೆರೆ: ಪಾರದರ್ಶಿಕತೆ, ಪ್ರಾಮಾಣಿಕತೆ, ನಿಷ್ಪಕ್ಷಪಾತ, ಸಮಯ ಪರಿಪಾಲನೆಯ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌. ನಾಗಶ್ರೀ ನೂತನ ನ್ಯಾಯಾಧೀಶರಿಗೆ ಕಿವಿಮಾತು ಹೇಳಿದ್ದಾರೆ.

Advertisement

ಅಧೀನ ನ್ಯಾಯಾಲಯಗಳ ಸಿವಿಲ್‌ ನ್ಯಾಯಾಧಿಧೀಶರಾಗಿ ಆಯ್ಕೆಯಾಗಿರುವ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಸದಸ್ಯರಾದ ನಿಖೀತಾ ಎಸ್‌. ಅಕ್ಕಿ, ವಿ.ಎಸ್‌. ವಿನುತಾ, ಶಿಲ್ಪಶ್ರೀ ಮತ್ತು ಚನ್ನಬಸಪ್ಪ ಆರ್‌. ಕೂಡಿ ಅವರಿಗೆ ಶುಕ್ರವಾರ ವಕೀಲರ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ
ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿರುವ ನಾಲ್ವರು ಸಹ ಪಾರದರ್ಶಿಕತೆ, ಪ್ರಾಮಾಣಿಕತೆ, ನಿಷ್ಪಕ್ಷಪಾತ, ಸಮಯ ಪರಿಪಾಲನೆ ಅನುಸರಿಸಬೇಕು ಎಂದರು.

ಸತತ ಪರಿಶ್ರಮ, ಸಾಧನೆ ಮತ್ತು ಗುರಿಯೊಂದಿಗೆ ನ್ಯಾಯಾಧೀಶರಾಗಿ ಆಯ್ಕೆಯಾಗುವರೆಗೆ ಒಂದು ಪ್ರಯತ್ನದ ಮುಕ್ತಾಯ ಆಗುತ್ತದೆ. ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಇನ್ನೊಂದು ಹಂತದ ಪ್ರಯಾಣ ಪ್ರಾರಂಭವಾಗುತ್ತದೆ. ಪಾರದರ್ಶಿಕತೆ, ಪ್ರಾಮಾಣಿಕತೆ, ನಿಸ್ಪಕ್ಷಪಾತ, ಸಮಯ ಪರಿಪಾಲನೆಯ ಜೊತೆಗೆ ನ್ಯಾಯಾಲಯದಲ್ಲಿ ಕಕ್ಷಿದಾರರು, ವಕೀಲರೊಂದಿಗೆ ಬಳಸುವ ಭಾಷೆ, ವರ್ತನೆ, ನಡವಳಿಕೆಯನ್ನ ಪ್ರತಿಯೊಬ್ಬರೂ ಗಮನಿಸುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅತೀ ಮುಖ್ಯ ಎಂದು ತಿಳಿಸಿದರು.

ಎಂತದ್ದೆ ಸಂದರ್ಭವೇ ಆಗಿರಲಿ ಯಾವುದೇ ಕಾರಣಕ್ಕೂ ಪಕ್ಷಪಾತ ತೋರಲೇಬಾರದು. ಸದಾ ನ್ಯಾಯಸಮ್ಮತವಾಗಿಯೇ ಇರಬೇಕು. ತಮ್ಮ ಸಿಬ್ಬಂದಿ ಜೊತೆಯೂ ಚೆನ್ನಾಗಿ ಇರಬೇಕು. ಕಚೇರಿಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿಕೊಳ್ಳಬೇಕು. ವಕೀಲರ ಜೊತೆಗೆ ಎಂದೆಂದಿಗೂ ವೈಯಕ್ತಿಕ ಮತ್ತು ವೃತ್ತಿ ವೈಷಮ್ಯ ತೋರಲೇಬಾರದು. ಸಮಯ, ಸಂದರ್ಭಕ್ಕೆ ತಕ್ಕಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಭಾರತದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಶೇ. 1ರಷ್ಟು ಜನರು ಮಾತ್ರ ನ್ಯಾಯಾಧೀಶರಾಗಿದ್ದಾರೆ. ದೇವರೇ ನಮಗೆ ಅಂತಹ ಅವಕಾಶ ನೀಡಿದ್ದಾನೆ ಎಂದು ಭಾವಿಸಬೇಕು. ಹಾಗಾಗಿ ಯಾರನ್ನೂ ಕೀಳಾಗಿ ಕಾಣಲೇಬಾರದು. ಯಾವುದೇ ಕಳಂಕ, ಕಪ್ಪುಚುಕ್ಕೆ ಬರದಂತೆ ಜವಾಬ್ದಾರಿಯಿಂದ
ನಡೆದುಕೊಳ್ಳಬೇಕು ಎಂದು ತಿಳಿಸಿದರು. ನ್ಯಾಯಾಧೀಶರಿಗೆ ಸಾಮಾಜಿಕ ಜೀವನ, ಗೆಳೆಯರ ವಲಯ ಇರುವುದಿಲ್ಲ ಎನ್ನುವ ಮಾತು ನಿಜ. ಅಂತದ್ದರ ನಡುವೆಯೂ ಖುಷಿ, ಆತ್ಮಸಂತೋಷ, ಆತ್ಮಸ್ಥೈರ್ಯದಿಂದ ಕರ್ತವ್ಯ ನಿರ್ವಹಣೆ ಮಾಡಬೇಕು. ವೃತ್ತಿಗೆ ನೀಡುವಷ್ಟೇ ಮಹತ್ವವನ್ನು ಕುಟುಂಬಕ್ಕೂ ನೀಡಬೇಕು. ಎಂತದ್ದೇ ಸ್ಥಿತಿ ಎದುರಾದರೂ ತಾಳ್ಮೆ, ಸಮಾಧಾನದಿಂದ ಇರಬೇಕು ಎಂದು ತಿಳಿಸಿದರು.

Advertisement

ಹಿರಿಯ ವಕೀಲರಾದ ಜಿ.ಸಿ. ರಾಜಶೇಖರ್‌, ರಾಮಚಂದ್ರ ಕಲಾಲ್‌, ಲೋಕಿಕೆಕೆ ಸಿದ್ದಪ್ಪ, ಎನ್‌.ಎಂ. ಆಂಜನೇಯ ಗುರೂಜಿ, ಟಿ.ಆರ್‌. ಗುರುಬಸವರಾಜ್‌, ರಿಜ್ವಿಖಾನ್‌ ಇತರರು ಮಾತನಾಡಿದದರು. ಅಧೀನ ನ್ಯಾಯಾಲಯಗಳ ಸಿವಿಲ್‌ ನ್ಯಾಯಾಧಿಧೀಶರಾಗಿ ಆಯ್ಕೆಯಾಗಿರುವ ನಿಖೀತಾ ಎಸ್‌. ಅಕ್ಕಿ, ವಿ.ಎಸ್‌. ವಿನುತಾ, ಎನ್‌.ಎಸ್‌. ಶಿಲ್ಪಶ್ರೀ, ಚನ್ನಬಸಪ್ಪ ಆರ್‌. ಕೂಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌ .ಟಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೌಟಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್‌. ಜಿನರಾಳ್ಕರ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಾಬಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಇದ್ದರು.
ಗೋಪಾಲ್‌ ಪ್ರಾರ್ಥಿಸಿದರು. ಎಚ್‌. ದಿವಾಕರ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next