Advertisement

ಕುಡಿಯುವ ನೀರಿಗೆ ಗರಿಷ್ಠ ಆದ್ಯತೆ ನೀಡಿ: ಡಾ|ಸೆಲ್ವಮಣಿ

09:42 PM May 16, 2019 | mahesh |

ಪುಂಜಾಲಕಟ್ಟೆ: ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಎಲ್ಲೆಲ್ಲಿ ಇದೆಯೋ ಅಲ್ಲಿ ಗರಿಷ್ಠ ಆದ್ಯತೆ ನೀಡಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ಹೇಳಿದರು.

Advertisement

ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ತಾಲೂಕು ಮಟ್ಟದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಸೂಚನೆ ನೀಡಿ, ಆದ್ಯತೆ ಮೇರೆಗೆ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ನೀರು ಒದಗಿಸುವ ಕಾರ್ಯ ನಡೆಸಿ, ಮಳೆ ಶುರುವಾಗುವ ಮೊದಲು ಸಿದ್ಧತೆಗಳನ್ನೂ ನಡೆಸಬೇಕು. ಯಾವುದೇ ದೂರುಗಳು ಬಾರದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪಂ.ಗೆ ಮೂರು ವೆಂಟೆಡ್‌ ಡ್ಯಾಂ
ಪ್ರತಿಯೊಂದು ಕೊಳವೆ ಬಾವಿ ರೀಚಾರ್ಜ್‌ ಆಗಬೇಕು, ಪ್ರತಿಯೊಂದು ಪಂ. ನಲ್ಲಿ ವೆಂಟೆಡ್‌ ಡ್ಯಾಂ ಕನಿಷ್ಠ ಮೂರು ನಿರ್ಮಾಣವಾಗುವಂತೆ ಪಿಡಿಒಗಳು ಆಸ್ಥೆ ವಹಿಸಬೇಕು. ವಾರದೊಳಗೆ ಪ್ರತಿ ಪಂ.ಗಳ ಪಿಡಿಒಗಳು 10 ಹೊಸ ಕೆಲಸಗಳನ್ನು ಗುರುತಿಸಿ ಈ ಕುರಿತು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಅಪೂರ್ಣವಾಗಿರುವ ಚೆಕ್‌ಡ್ಯಾಂ ಗಳ ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು, 36 ಅಂಗನವಾಡಿ ಕಟ್ಟಡಗಳ ಪೈಕಿ 29 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿದ್ದು, ನೀರಿನ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸಿಇಒ ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.

2016-17ನೇ ಸಾಲಿನಲ್ಲಿ ಆರಂಭ ಗೊಂಡ ಅಂಗನವಾಡಿ ಕೇಂದ್ರದ ನಿರ್ಮಾಣ ಗೊಂಡ ಅಂಗನವಾಡಿ ಕೇಂದ್ರ ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂಗನವಾಡಿ ಕಟ್ಟುತ್ತಿದ್ದಿರೋ ಅಥವಾ ಅರಮನೆ ಕಟ್ಟುತ್ತಿ ದ್ದಿರೋ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ಜಿ.ಪಂ. ಉಪಕಾರ್ಯದರ್ಶಿ ಮಹೇಶ್‌, ನೆರವು ಘಟಕದ ಮಂಜುಳಾ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಉಪಸ್ಥಿತರಿದ್ದರು. ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನ ಇಲಾಖೆ, ಜಿ.ಪಂ. ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಹಾಗೂ ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿ ಹಿನ್ನಡೆ: ಪಿಡಿಒಗಳಿಗೆ ಕ್ಲಾಸ್‌
ತಾಲೂಕಿನ ಪ್ರಗತಿಯಲ್ಲಿ ಹಿನ್ನಡೆಯಾಗಿರುವ ಬಗ್ಗೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಸೆಲ್ವಮಣಿ, ಉಪಕಾರ್ಯದರ್ಶಿ ಮಹೇಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡ ಅವರು, ನರೇಗಾ ಯೋಜನೆಯಡಿ ಪಂಚಾಯತ್‌ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವರದಿ ಪಡೆದರು.  ಮಳೆಗಾಲ ಬಂದಾಗ ಬಾವಿ ತೋಡಲು ಆಗುವುದಿಲ್ಲ ಎಂದ ಅವರು, ತಾಲೂಕಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಸಾಧನೆಯಲ್ಲಿ ಹಿಂದುಳಿದಿದ್ದು, ದೂರದೃಷ್ಟಿ ಕೊರತೆ ಇದೆ ಎಂದರು.

ಪ್ರಗತಿ ಕಾಮಗಾರಿಗಳ ಬಗ್ಗೆ ಸರಿಯಾದ ಯೋಜನೆ ರೂಪಿಸಿಲ್ಲ. 19 ಗ್ರಾಮ ಪಂಚಾಯತ್‌ಗಳು ಶೇ. 50ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿವೆ. ಪ್ರತೀ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಂದ ಪ್ರಗತಿ ಹಿನ್ನಡೆ ಬಗ್ಗೆ ಕಾರಣ ತಿಳಿದುಕೊಂಡ ಅವರು, ದ.ಕ. ಜಿಲ್ಲೆಯಲ್ಲಿ ಮಂಗಳೂರು ಶೇ. 79, ಬಂಟ್ವಾಳ, ಬೆಳ್ತಂಗಡಿ ಶೇ. 35, ಸುಳ್ಯ, ಪುತ್ತೂರು ಶೇ. 45 ಪ್ರಗತಿ ಸಾಧಿಸಿದೆ ಎಂದರು.ಅಮ್ಮುಂಜೆ, ಬೋಳಂತೂರು, ಕರಿಯಂಗಳ, ಮೇರಮಜಲು, ನೆಟ್ಲ ಮುಟ್ನೂರು, ಸಜೀಪಮುನ್ನೂರು, ಸಜೀ ಪಪಡು ಗ್ರಾಮ ಪಂಚಾಯತ್‌ಗಳಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲ. ಒಂದು ವಾರದೊಳಗಾಗಿ 10 ಹೊಸ ಕಾಮಗಾರಿಗಳನ್ನು ಗುರುತಿಸಿ ಜಿಲ್ಲಾ ಪಂಚಾಯತ್‌ಗೆ ವರದಿ ನೀಡುವಂತೆ ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next