ಕಟಪಾಡಿ: ಮಟ್ಟು ನೂತನ ಸೇತುವೆ ಯಡಿ ತುಂಬಲಾಗಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯವು ಬಹುತೇಕ ಪೂರ್ಣಗೊಂಡಿದ್ದು, ಕೃಷಿಕರು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಅಕಾಲಿಕವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ, ಮಣ್ಣು ತೆಗೆಯುವ ಕಾರ್ಯವನ್ನು ನಿಲುಗಡೆ ಗೊಳಿಸದೆ ನಿರಂತರವಾಗಿ ಸುಮಾರು 15 ದಿನಗಳ ಕಾಲ ನಡೆಸಿ ಇದೀಗ ಬಹುತೇಕ ಎಲ್ಲ ಮಣ್ಣನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ತೆರವುಗೊಳಿಸಲಾದ ಮಣ್ಣನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.
ಮಟ್ಟು ಗ್ರಾಮದ ರಾಜಪಥವಾಗಿ ತೆರೆದುಕೊಳ್ಳಬೇಕಿದ್ದ ಮಟ್ಟು ನೂತನ ಸೇತುವೆಯ ಕಾಮಗಾರಿ ಪೂರ್ಣಗೊಂಡರೂ ಸಂಪರ್ಕ ರಸ್ತೆಯ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಈ ನಡುವೆ ಸೇತುವೆಯ ನಿರ್ಮಾಣಕ್ಕಾಗಿ ಹೊಳೆಯನ್ನು ಮಣ್ಣಿನಿಂದ ತುಂಬಿಸಲಾಗಿತ್ತು. ಪಿನಾಕಿನಿ ಹೊಳೆಯ ನೀರು ಸರಾಗವಾಗಿ ಹರಿಯದಂತೆ ತಡೆಯೊಡ್ಡಲಾಗಿತ್ತು.
ನಿರ್ಮಾಣಗೊಂಡ ಸೇತುವೆಯ ಕೆಲ ಕಿಂಡಿಗಳ ತಳಭಾಗದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಇನ್ನುಳಿದಂತೆ ಕೆಲ ಕಿಂಡಿಗಳ ಭಾಗದಲ್ಲಿ ಹೊಳೆಗೆ ತುಂಬಿಸಿರುವ ಮಣ್ಣನ್ನು ತೆರವುಗೊಳಿಸದೆ ಬಾಕಿ ಇರಿಸಲಾಗಿತ್ತು. ಹಾಗಾಗಿ ಈ ಬಾರಿಯ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಮಟ್ಟು ಪಿನಾಕಿನಿ ಹೊಳೆಯಲ್ಲಿ ಹರಿಯಬೇಕಾದ ನೀರು ನದಿತಟವನ್ನು ದಾಟಿ ಗದ್ದೆ, ತೋಟಗಳತ್ತ ಹಾಗೂ ವಾಸ್ತವ್ಯದ ಮನೆಗಳತ್ತ ಮುನ್ನುಗ್ಗಲಿದೆ ಎಂಬ ಭೀತಿ ತೀರದ ನಿವಾಸಿಗಳದ್ದಾಗಿತ್ತು. ಅದರೊಂದಿಗೆ ಕೃಷಿ ಹಾನಿಯಾಗುವ, ತೋಟಗಾರಿಕೆ ಬೆಳೆಯು ವಿನಾಶದತ್ತ ಸಾಗುವ ಭೀತಿಗೆ ಮುಕ್ತಿಯನ್ನು ಕಲ್ಪಿಸಲಾಗಿದೆ. ಈ ಮಳೆಗಾಲದಲ್ಲಿ ಸ್ವಲ್ಪ ನೆಮ್ಮದಿಯ ಪರಿಸ್ಥಿತಿ ನಮ್ಮದಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿಗಳ ಆಕ್ರೋಶದ ಕುರಿತು ಉದಯವಾಣಿಯು ಜನಪರ ಕಾಳಜಿಯ ವರದಿಯನ್ನು ಮೇ 6ರಂದು ಪ್ರಕಟಿಸಿತ್ತು. ಆ ಹಿನ್ನೆಲೆ ಮೇ 9ರಂದು ಸಂಜೆಯ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್ ಅಂಗಾರ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಸಹಿತ ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಮೇ 11ರಿಂದು ಮಣ್ಣು ತೆರವು ಕಾರ್ಯಾಚರಣೆಯು ಆರಂಭಗೊಂಡಿತ್ತು. ಇದೀಗ ಮಣ್ಣು ತೆರವು ಕಾರ್ಯಾಚರಣೆಯು ಬಹುತೇಕ ಪೂರ್ಣಗೊಂಡಿದೆ. ರೈತರು, ಕೃಷಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದಂತಾಗಿದೆ.
ಕೃತಕ ನೆರೆ ಭೀತಿ ಇನ್ನಿಲ್ಲ
ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದೆ. ಮಳೆಗಾಲದಲ್ಲಿ ಕೃತಕ ನೆರೆಭೀತಿಯಿಂದ ಪಾರಾದಂತೆ ಆಗಿದೆ. ಹಳೆಯ ಮಟ್ಟು ಅಣೆಕಟ್ಟಿನ ಕನಿಷ್ಠ 5 ಕಿಂಡಿಗಳ ನಿಷ್ಪ್ರಯೋಜಕ ಕಾಂಕ್ರೀಟ್ ಬೆಡ್ ತೆರವುಗೊಳಿಸಿದಲ್ಲಿ ಮತ್ತಷ್ಟು ಅನುಕೂಲತೆ ಕಲ್ಪಿಸಿದಂತಾಗುತ್ತದೆ.
–ಅವಿನಾಶ್, ಮಟ್ಟು