Advertisement

Krishna Byre Gowda; 17 ಲಕ್ಷ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ

12:40 AM Jun 11, 2024 | Team Udayavani |

ಬೆಂಗಳೂರು: ರಾಷ್ಟ್ರೀಯ ವಿಪತ್ತು ನಿಧಿಯಿಂದ ಜೀವನೋಪಾಯ ಪರಿಹಾರ ರೂಪದಲ್ಲಿ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 17.09 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2,800- 3,000 ರೂ.ನಂತೆ ವಿತರಿಸಲು ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ರಾಜ್ಯದಲ್ಲಿ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಿ ನಿಭಾಯಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ರಚಿಸಲಾಗಿರುವ ಸಂಪುಟ ಉಪ ಸಮಿತಿ ಸೋಮವಾರ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.

ಆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡರು, ರಾಜ್ಯದ 17.09 ಲಕ್ಷ ಸಣ್ಣ ಅತಿ ಸಣ್ಣ ರೈತರಿಗೆ ಜೀವನೋಪಾಯಕ್ಕಾಗಿ ನಷ್ಟ ಪರಿಹಾರವಾಗಿ ತಲಾ 3 ಸಾ.ರೂ. ನೀಡಲು ನಿರ್ಧರಿಸಲಾಗಿದೆ. ಫ‌ಲಾನುಭವಿಗಳ ಪಟ್ಟಿ ಸಿದ್ಧವಾಗಿದ್ದು, ಒಂದು ವಾರದೊಳಗೆ ರೈತರ ಖಾತೆಗೆ ಜಮೆ ಆಗಲಿದೆ ಎಂದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯೊಂದಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯನ್ನೂ ಸೇರಿಸಿ ನೀಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ 3,454 ಕೋಟಿ ರೂ.ಬಂದಿತ್ತು. ಇದರಲ್ಲಿ 2,451 ಕೋಟಿ ರೂ.ವನ್ನು 27.5. ಲಕ್ಷ ರೈತರಿಗೆ ಮೇ ಮೊದಲ ವಾರದಲ್ಲಿ ವಿತರಿಸಲಾಗಿದೆ. ಉಳಿದ ಹಣವನ್ನು ಇನ್ನಷ್ಟು ರೈತರಿಗೆ ಕೊಡಲು ಸಂಪುಟ ಸಮಿತಿಯಲ್ಲಿ ತೀರ್ಮಾನ ಮಾಡಬೇಕಾಗಿತ್ತು. ಈಗ ಚರ್ಚೆ ನಡೆಸಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಬೆಳೆ ನಷ್ಟ ಪರಿಹಾರ ಸಿಗದ ಮಳೆ ಆಶ್ರಿತ ರೈತರು, ನಾಲೆ ಕೊನೆಯ ಭಾಗದ ರೈತರಿಗೆ ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ. ಈ ತೀರ್ಮಾನದಿಂದ 7 ಲಕ್ಷ ರೈತರಿಗೆ ಲಾಭವಾಗಲಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಗರಿಷ್ಠ ಸಂಖ್ಯೆಯಲ್ಲಿ ರೈತರು ಬರ ಪರಿಹಾರ ಪಡೆದುಕೊಂಡಿದ್ದಾರೆ. ಈ ಹಿಂದೆ 25 ಲಕ್ಷ ರೈತರಿಗೆ ಗರಿಷ್ಠ ಅನುಕೂಲ ಆಗಿತ್ತು. ಈ ಬಾರಿ 40 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಪರಿಹಾರ ಸಿಗಲಿದೆ ಎಂದರು. ಸಹಕಾರ ಸಚಿವ ಎನ್‌.ರಾಜಣ್ಣ ಉಪಸ್ಥಿತರಿದ್ದರು.

Advertisement

ವಾಡಿಕೆಗಿಂತ ಶೇ.31 ಹೆಚ್ಚು ಮಳೆ
ಮೇ 31ರ ವರೆಗೆ ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ 115 ಮಿ.ಮೀ. ವಾಡಿಕೆ ಮಳೆ ಆಗುತ್ತದೆ. ಈ ಬಾರಿ 151 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಎಂದು ಕೃಷ್ಣ ಬೈರೇಗೌಡರು ಹೇಳಿದರು. ಮುಂಗಾರು ಜೂನ್‌ 2ಕ್ಕೆ ಪ್ರವೇಶಿಸಿದ್ದು, ಸೋಮವಾರ ರಾಜ್ಯದ ಸಂಪೂರ್ಣ ಭಾಗಕ್ಕೆ ವಿಸ್ತರಿಸಿದೆ. ಹತ್ತು ದಿನಗಳ ಅವಧಿಯಲ್ಲಿ ವಾಡಿಕೆ ಪ್ರಕಾರ 51 ಮಿ.ಮೀ. ಮಳೆ ಆಗಬೇಕಾಗಿತ್ತು, ಈಗಾಗಲೇ 91 ಮಿ.ಮೀ. ಮಳೆಯಾಗಿದ್ದು, ಅದು ವಾಡಿಕೆಗಿಂತ ಶೇ.78 ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಹೋದ ವರ್ಷ ಶೇ.8 ಮಳೆಯಾಗಿತ್ತು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next