ಶಿರಸಿ: ತಾಲೂಕಿನ ಮತ್ತಿಘಟ್ಟ ಕಲ್ಗದ್ದೆ (ಕೆಳಗಿನಕೇರಿ)ಯಲ್ಲಿ ಮತ್ತೆ ಆತಂಕದ ಸ್ಥಿತಿಯಲ್ಲಿ ರೈತ ಕುಟುಂಬ ಬದುಕುವಂತಾಗಿದೆ. ಕಳೆದ ಎರಡು ವರ್ಷವೂ ಕುಸಿದು ಹೋಗಿದ್ದ ಚಂದ್ರಶೇಖರ ನರಸಿಂಹ ಹೆಗಡೆಯವರ ತೋಟ ಮತ್ತೆ ಈ ಬಾರಿಯೂ ಕುಸಿಯಲಾರಂಭಿಸಿದೆ. ಮತ್ತೆ 25 ಕ್ಕೂ ಹೆಚ್ಚು ಅಡಿಕೆ ಮರ ಮಣ್ಣಿನಡಿ ಸೇರಿದೆ.
ಕಳೆದ ಎರಡು ವರ್ಷಗಳ ಭೂ ಕುಸಿತದಿಂದಾದ ಹಾನಿಗೆ ಪರಿಹಾರ ಇನ್ನೂ ಮರೀಚಿಕೆಯಾಗಿರುವಾಗಲೇ ಮತ್ತೆ ಅಳಿದುಳಿದ ತೋಟವೂ ಕುಸಿಯಲಾರಂಭಿಸಿದೆ. ಅಲ್ಲದೇ ಮತ್ತೆ ಕೆಲ ಭೂ ಪ್ರದೇಶ ಬಾಯಿಬಿಟ್ಟು ನಿಂತಿದೆ.
ಸರ್ಕಾರ ಈ ಬಡರೈತರ ಬದುಕಿಗೆ ದಾರಿತೋರಿಸುವ ಅನಿವಾರ್ಯತೆ ಇದೆ. ಎರಡು ವರ್ಷದ ಹಿಂದೆ ಪ್ರಥಮ ಬಾರಿಗೆ ತೋಟ ಕುಸಿದಾಗ ಮಂತ್ರಿಗಳು, ಶಾಸಕರು, ವಿಧಾನಸಭಾಧ್ಯಕ್ಷರು, ಅಧಿಕಾರಿಗಳು ಭೇಟಿ ನೀಡಿ ವಿಶೇಷ ಪ್ರಕರಣ ಎಂದು ಪರಿಹಾರವನ್ನು ಸರ್ಕಾರದಿಂದ ಕೊಡಿಸುವ ಮಾತನಾಡಿದ್ದರು. ಆದರೆ ಮರು ವರ್ಷ ಮತ್ತೆ ಕುಸಿದರೂ ಈತನಕ ಯಾವುದೇ ಪರಿಹಾರ ಈ ಕುಟುಂಬಕ್ಕೆ ಬಂದಿಲ್ಲ. ಇನ್ನಾದರೂ ಸೂಕ್ತ ಪರಿಹಾರ ಮತ್ತು ಬದಲಿ ಭೂಮಿ ನೀಡುವಂತಾಗಬೇಕೆನ್ನುವದು ಸಂತ್ರಸ್ತರ ಆಗ್ರಹವಾಗಿದೆ. ಅದಕ್ಕೆ ಸರ್ಕಾರ ಸ್ಪಂದಿಸಿ ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡಬೇಕಾಗಿದೆ.
ಜಿಲ್ಲೆಯಲ್ಲಿ ಎರಡು ವರ್ಷದ ಹಿಂದೆ ಅತಿವೃಷ್ಟಿಯಿಂದ ಶಿರಸಿ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಭೂ ಕುಸಿತದಿಂದ 50 ಕ್ಕೂ ಹೆಚ್ಚು ರೈತರ100 ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು ಈ ಭೂಮಿಯಲ್ಲಿ ಮತ್ತೆ ತೋಟ ಮಾಡುವುದು ಅಸಾಧ್ಯವಾಗಿದ್ದು ಪರಿಹಾರ ಮತ್ತು ಬದಲಿ ಭೂಮಿ ನೀಡುವ ಅನಿವಾರ್ಯತೆ ಇದೆ. ಆದರೆ ಇವರ್ಯಾರಿಗೂ ಪರಿಹಾರವಾಗಲಿ, ಬದಲಿ ಭೂಮಿಯಾಗಲಿ ಸರ್ಕಾರ ನೀಡದೆ ರೈತರ ಬದುಕಿನೊಂದಿಗೆ ಆಟವಾಡುತ್ತಿದ್ದಂತಿದೆ.
ಜಿಲ್ಲೆಯಲ್ಲಿ ಸುಮಾರು 100 ರಿಂದ 150 ಕೋಟಿ ಪರಿಹಾರ, 150 ಎಕರೆ ಭೂಮಿ ಬೇಕಾಗಲಿದೆ. ಇದರತ್ತ ಸರ್ಕಾರ ವರ್ಷ ಕಳೆದರೂ ಗಮನ ನೀಡಿದಂತೆ ಕಾಣುತ್ತಿಲ್ಲ. ವಿಶೇಷ ಪ್ರಕರಣ ಎಂದು ಈ ರೈತರ ಬದುಕಿಗೆ ದಾರಿಯಾಗಬೇಕಾಗಿದೆ. ಅಡಿಕೆ ತೋಟ ನಾಶವಾದರೆ ಓರ್ವ ಮನುಷ್ಯನ ಜೀವನವೇ ನಶಿಸಿಹೋಗುತ್ತದೆ. ಒಮ್ಮೆ ನಾಶವಾದ ತೋಟ ಮರುನಿರ್ಮಾಣಕ್ಕೆ ಕನಿಷ್ಟ 15 ವರ್ಷ ಹಿಡಿಯಲಿದೆ. ಸ್ವತಂತ್ರ ಬದುಕು ಕಟ್ಟಿಕೊಂಡಿದ್ದ ಮಧ್ಯಮ ವರ್ಗದ ಈ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡದಿದ್ದರೆ ಅನಿರೀಕ್ಷಿತ ಸಂಕಷ್ಟದಿಂದ ಕಂಗಾಲಾಗಿರುವ ಕುಟುಂಬ ಮುಂದೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಇನ್ನಾದರೂ ಮಲೆನಾಡ ಅಡಿಕೆ ಬೆಳೆಗಾರರಿಗೆ ಬಂದೊದಗಿದ ಈ ಸಂಕಷ್ಟದಿಂದ ಪಾರುಮಾಡಲು ಸರ್ಕಾರ ಮನಸ್ಸು ಮಾಡಬೇಕಾಗಿದೆ.