ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಗೆ ಎಲ್ಲಾ ತಂಡಗಳು ತಯಾರಿ ಮಾಡಿಕೊಳ್ಳುತ್ತಿದೆ. ಪ್ರಮುಖ ತಂಡಗಳು ಆಟಗಾರರ ಸಮಸ್ಯೆ ಎದುರಿಸುತ್ತಿದೆ. ಆದರೆ ಅತಿಥೇಯ ಆಸ್ಟ್ರೇಲಿಯಾ ತಂಡದ ನಾಯಕ ಗಾಯಗೊಂಡಿದ್ದು, ತಲೆನೋವಾಗಿ ಪರಿಣಮಿಸಿದೆ.
ಹಾಲಿ ಚಾಂಪಿಯನ್ ನಾಯಕ ಆ್ಯರೋನ್ ಫಿಂಚ್ ಅವರು ಗಾಯಗೊಂಡಿದ್ದು, ಟಿ20 ವಿಶ್ವಕಪ್ ಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ನಾಯಕನ ಹುಡುಕಾಟದಲ್ಲಿದೆ ಎನ್ನಲಾಗಿದೆ.
ತಂಡದ ಹಿರಿಯ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಅವರು ಟಿ20 ವಿಶ್ವಕಪ್ ನಲ್ಲಿ ಆಸೀಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಪ್ರಸ್ತುತ ಕ್ರಿಕೆಟ್ ಆಸ್ಟ್ರೇಲಿಯಾದ ಒಪ್ಪಂದದ ಪಟ್ಟಿಯಲ್ಲಿಲ್ಲದ ವೇಡ್ ಸದ್ಯ ಕಾಂಗರೂಗಳ ತಂಡದ ಅತ್ಯಂತ ನಿರ್ಣಾಯಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಫಿಂಚ್ ಅವರು ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಯಾರನ್ನೂ ಹೆಸರಿಸಲಾಗಿಲ್ಲ. ಇನ್ನೊಬ್ಬ ಅನುಭವಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನು ಏಕದಿನ ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಆಲಿಯಾ ಪಕ್ಕದಲ್ಲಿ ಮಲಗುವಾಗ ನಿಜಕ್ಕೂ ಕಷ್ಟವಾಗುತ್ತದೆ..! ತನ್ನ ಕಷ್ಟ ಹೇಳಿದ ಪತಿ ರಣ್ಬೀರ್
ಈ ವರ್ಷದ ಆರಂಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದವನ್ನು ನಿರಾಕರಿಸಿದ ವೇಡ್, ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಸರಣಿ ಸೇರಿದಂತೆ ಅವರು ಆಡಿದ 12 ಟಿ20 ಗಳಿಗೆ ಸುಮಾರು 350,000 ಆ.ಡಾ ಪಡೆಯುತ್ತಾರೆ ಎಂದು ವರದಿ ಹೇಳಿದೆ.