Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಪ್ರಸಕ್ತ ಸಾಲಿನಲ್ಲಿ 194 ಕಾಮಗಾರಿಗಳು: ಮಟ್ಟಾರು

01:36 AM Oct 31, 2021 | Team Udayavani |

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 2021-22ನೇ ಸಾಲಿನಲ್ಲಿ ಒಟ್ಟು 194 ಕಾಮಗಾರಿಗಳನ್ನು ನಿಗದಿಪಡಿಸಿದ್ದು 24 ಕಾಮಗಾರಿಗಳು ಪೂರ್ಣಗೊಂಡು 170 ಪ್ರಗತಿಯಲ್ಲಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ವರ್ಷದ 194 ಕಾಮಗಾರಿಗಳಲ್ಲಿ 35 ಕಾಲುಸಂಕ, 92 ರಸ್ತೆಗಳ ನಿರ್ಮಾಣ, 11 ಮೀನು ಮಾರುಕಟ್ಟೆ, 7 ವಾಣಿಜ್ಯ ಸಂಕೀರ್ಣ, ಥೀಂ ಪಾರ್ಕ್‌ ಹಾಗೂ ರಂಗಮಂದಿರ, 17 ಚರಂಡಿ, ಕೆರೆ, ಇಂಟರ್‌ಲಾಕ್‌ ಶೌಚಾಲಯ, 6 ಸಮುದಾಯ ಭವನ, ಸಭಾಭವನ, ಯಾತ್ರಿ ನಿವಾಸ, 4 ಬಸ್‌ ನಿಲ್ದಾಣ ಕಾಮಗಾರಿಗಳು ಸೇರಿವೆ. ಬೆಟ್ಟಂಪಾಡಿಯಲ್ಲಿ ತೂಗುಸೇತುವೆ ಯೋಜನೆ ಕೈಗೊಳ್ಳಲಾಗಿದೆ ಎಂದರು.

150 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ
ಪ್ರಾಧಿಕಾರದ ವಿವಿಧ ಯೋಜನೆಗಳಿಗೆ ರಾಜ್ಯ ಸರಕಾರಕ್ಕೆ 150 ಕೋ.ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಇದರಲ್ಲಿ ಒಣಮೀನು ಸಂಸ್ಕರಣಾ ಘಟಕ, ರಾಷ್ಟ್ರೀಯ ಹೆದ್ದಾರಿ ವಿಭಾಜಕಗಳಲ್ಲಿ ಪಿಂಕ್‌ ಪೆಪ್ಪರ್‌ ಬೆಳೆಸುವುದು, ಕಾಪು ದೀಪಸ್ತಂಭ ಅಭಿವೃದ್ಧಿ ಕಾಮಗಾರಿ. ಡಿಜಿಟಲ್‌ ಸೈನೇಜ್‌ ಬೋರ್ಡ್‌, ಬಹು ಹಂತಗಳ ಕಾರು ಪಾರ್ಕಿಂಗ್‌ ನಿರ್ಮಾಣ ಯೋಜನೆಗಳು ಸೇರಿವೆ. ಸೋಲಾರ್‌ ಮೂಲಕ ಮೀನು ಒಣಗಿಸುವ ಯೋಜನೆಯನ್ನು ಮಂಗಳೂರು ಹಾಗೂ ಮಲ್ಪೆಯಲ್ಲಿ ಸ್ಥಾಪಿಸಲುದ್ದೇಶಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಕೈಗಾರಿಕೆ ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಹೂಡಿಕೆದಾರರ ಸಮಾವೇಶ ಹಾಗೂ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಪಾರ್ಕ್‌ ಸ್ಥಾಪನೆಗೆ ಕೇಂದ್ರಕ್ಕೆ ಮನವಿ ಹಾಗೂ ಕರಾವಳಿ ಕರ್ನಾಟಕದ ವಿಶಿಷ್ಟ ಭತ್ತದ ತಳಿಗಳಿಗೆ ಜಿಯೋ ಟ್ಯಾಗಿಂಗ್‌ಗೆ ಉದ್ದೇಶಿಸಲಾಗಿದೆ ಎಂದರು.

ಇದನ್ನೂ ಓದಿ:80 ಸಾವಿರ ಫ‌ಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್‌

ಸಮುದ್ರ ನೀರಿನ ಗುಣಮಟ್ಟ ಪರೀಕ್ಷೆ
ಗೋವಾದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಶಿಯಾನೋಗ್ರಫಿ ಮೂಲಕ ಕರ್ನಾಟಕದ ಕರಾವಳಿ ಜಿಲ್ಲೆಗಳ ಸಮುದ್ರ ನೀರಿನ ಗುಣಮಟ್ಟ ವಿಶ್ಲೇಷಣೆ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.

Advertisement

ನ. 2: ರಾಜ್ಯೋತ್ಸವ, ದೀಪಾವಳಿ ಸಂಭ್ರಮ
ಪ್ರಾಧಿಕಾರದ ಮಂಗಳೂರು ಕಚೇರಿಯಲ್ಲಿ ನ. 2ರಂದು ಸಂಜೆ 4ಕ್ಕೆ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮಾಚರಣೆ ಏರ್ಪಡಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಕಾರ್ಯವಾಹ ಪ್ರಕಾಶ್‌ ದೀಪ ಬೆಳಗುವರು. ಕರಾವಳಿಯ ಮೂರು ಜಿಲ್ಲೆಗಳ ಶಾಸಕರನ್ನು ಆಹ್ವಾನಿಸಲಾಗುವುದು. ಕೊರೊನಾ ವಾರಿಯರ್‌ಗಳಿಗೆ ಸಮ್ಮಾನ ನಡೆಯಲಿದೆ ಎಂದರು.ಪ್ರಾಧಿಕಾರದ ಸದಸ್ಯೆ ಕೇಸರಿ ಯುವರಾಜ್‌, ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

ಸಸಿಹಿತ್ಲಿನಲ್ಲಿ ಮತ್ಸ್ಯಗ್ರಾಮ
ಮಂಗಳೂರು ತಾಲೂಕಿನ ಸಸಿಹಿತ್ಲಿನಲ್ಲಿ ಪ್ರಧಾನಮಂತ್ರಿಗಳ ಮತ್ಸ್ಯ ಸಂಪದ ಯೋಜನೆಯಡಿ ಮತ್ಸ್ಯ ಗ್ರಾಮ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಯೋಜನೆಗೆ ಅಂದಾಜು ಮೊತ್ತ 7.50 ಕೋ. ರೂ. ನಿಗದಿಪಡಿಸಲಾಗಿದ್ದು, 3 ಕೋ.ರೂ. ರಾಜ್ಯ ಸರಕಾರ‌ ಭರಿಸಲಿದೆ. ಯೋಜನೆಯಲ್ಲಿ ಸೋಲಾರ್‌ ಬಳಸಿ ಮೀನು ಒಣಗಿಸುವ ವ್ಯವಸ್ಥೆ, ಮೀನುಗಾರ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಕೋಲ್ಡ್‌ ಸ್ಟೋರೇಜ್‌, ಬಲೆ ದುರಸ್ತಿ ಘಟಕ ಕೈಗೊಳ್ಳಲು ಅವಕಾಶವಿದೆ. ಮುಂದಿನ ಹಂತದಲ್ಲಿ ಮಲ್ಪೆ ಹಾಗೂ ಹೊನ್ನಾವರದಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ವಿವರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next